ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ‘ಆಶಾ’ ಹೋರಾಟ.. 3-4 ದಿನಗಳಲ್ಲಿ ಹಿಂಬಾಕಿ ನೀಡಲು ಅಧಿಕಾರಿಗಳು ಒಪ್ಪಿಗೆ

ಬೆಂಗಳೂರು: ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವಂತೆಯೇ ಇತ್ತ ರಾಜ್ಯ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರು ರಣಕಹಳೆ ಮೊಳಗಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಸೇನಾನಿಗಳೆನಿಸಿರುವ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಕಳೆದ ಮೂರು ತಿಂಗಳ ಹಿಂಬಾಕಿ ಗೌರವಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ನಡೆಸಿದರು. ಕೇಂದ್ರ ಕಾರ್ಮಿಕ ಸಂಘಟನೆಯಾದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಈ ಹೋರಾಟದ ಮುಂದಾಳತ್ವವಹಿಸಿತ್ತು.

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕೆ.ವಿ. ಭಟ್ ಸರ್ಕಾರದ ನಿರ್ಲಕ್ಷ್ಯದ ವಿರುದ್ದ ಅಕ್ರೋಶ ಹೊರಹಾಕಿದರು. ಇಂದು ಆಶಾ ಕಾರ್ಯಕರ್ತೆಯರು ಅವರಿಗೆ ಮೀಸಲಿದ್ದ ಎರಡು ಘಂಟೆ ಅವಧಿಯ ಕೆಲಸಗಳ ಜೊತೆ ಸರ್ಕಾರದ ಎಲ್ಲಾ ಯೋಜನೆಗಳು, ಕಾರ್ಯಕ್ರಮಗಳಿಗೂ ಕಾರ್ಯಪ್ರವೃತ್ತರಾಗಿದ್ದಾರೆ. ಚುನಾವಣೆ ಬಂದರೂ ಅಲ್ಲಿಯೂ ಆಶಾಗಳನ್ನು ತೊಡಗಿಸುತ್ತಾರೆ ಆದರೆ ಗೌರವಧನ ಮಾತ್ರ ಪುಡಿಗಾಸಿನಷ್ಟು ಕೊಡುತ್ತಾರೆ ಎಂದರು.

ಕಾರ್ಮಿಕ ಕಾನೂನಿನ ನಿಯಮದಡಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಹೋರಾಡುತ್ತಾ ಬಂದಿದ್ದೇವೆ. ಆದರೆ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಮಾಡಿ ಅದರಡಿ ಪ್ರಚಾರಗಟ್ಟಿಸಿಕೊಳ್ಳುವುದು ಬಿಟ್ಟರೆ ಆ ಯೋಜನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಮುಖಂಡರಾದ ಟಿ.ಸಿ. ರಮಾ ಅವರು ಮಾತನಾಡಿ, ಇದೇ ತಿಂಗಳ 27 ಹಾಗೂ 28ಕ್ಕೆ ಬೆಳಗಾವಿ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಮುಖ್ಯವಾಗಿ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಹೆಚ್ಚಳ ಹಾಗೂ ಅವರುಗಳ ಆದಾಯಕ್ಕೆ ಕಂಟಕವಾಗಿರುವ ಆರ್‌ಸಿಹೆಚ್ ಪೋರ್ಟಲ್‌ನ ಸಮಸ್ಯೆಗಳು, ಆಪ್ ಆಧಾರಿತ ಕೆಲಸಗಳ ಬಗ್ಗೆ ನಿರ್ಧಾರವನ್ನು ಅಧಿವೇಶನದ ಸಮಯದಲ್ಲಿ ಶಾಸಕರು ಹಾಗೂ ಸಚಿವರುಗಳ ಗಮನಕ್ಕೆ ತರಲು ಇಚ್ಛಿಸುತ್ತೇವೆ. ಈಗಾಗಲೇ ನಗರದ ಬಹುತೇಕ ಆಶಾ ಕಾರ್ಯಕರ್ತೆಯರು ಆಯಾ ಕ್ಷೀತ್ರದ ಶಾಸಕರಿಗೆ ಸ್ವತಹ ಹೋಗಿ ಮನವಿ ಪತ್ರವನ್ನು ಕೊಟ್ಟಿದ್ದಾರೆ. ಇನ್ನು ಹಿಂಬಾಕಿ ಮೂರು ತಿಂಗಳ ಗೌರವಧನನ್ನು ಬಿಡುಗಡೆ ಮಾಡಬೇಕೆಂದು ಕಳೆದ ತಿಂಗಳಷ್ಟೆ ನಾವು ಇದೇ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡಿದಾಗ ಅಧಿಕಾರಿಗಳು ವಾರದಲ್ಲೇ ಹಿಂಬಾಕಿ ಗೌರವಧನವನ್ನು ಪಾವತಿಸುತಿಸುವ ಭರವಸೆ ನೀಡಿದ್ದರು, ಆದರೆ ಕಳೆದು ಮೂರು ವಾರವಾದರೂ ಅದರ ಬಗ್ಗೆ ಯಾವುದೇ ಕ್ರಮ ಜರುಗಿಲ್ಲ. ಇಂದು ಪದೇ ಪದೇ ಬಡ ಹೆಣ್ಣು ಮಕ್ಕಳಾದ ಇವರುಗಳನ್ನು ಬೀದಿಗಿಳಿಸುತ್ತಿರುವ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ತೋರದೇ ಇವರ ಸೇವೆಗಳನ್ನು ಚೆನ್ನಾಗಿ ಬಳಸಿಕೊಂಡು ಕಷ್ಟ ಪಟ್ಟು ಹೆಣಗುವ ಆಶಾಗಳಿಗೆ ಗೌರವಧನ ನೀಡದೇ ನಡುಬೀದಿಯಲ್ಲಿ ಬಿಟ್ಟಿದ್ದಾರೆ ಎಂದು ದೂರಿದರು.

ಈ ನಡುವೆ, ಹೋರಾಟ ಸ್ಥಳಕ್ಕೆ ಧಾವಿಸಿದ ರಾಜ್ಯ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿಗಳಾದ ಡಾ. ಪ್ರಭು ಗೌಡ ಅವರು ಆಶಾಗಳ ಅಹವಾಲುಗಳನ್ನು ಆಲಿಸಿದರು ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ 3-4 ದಿನಗಳೊಳಲ್ಲಿ ಹಿಂಬಾಕಿ ಗೌರವಧನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದರು. ಉಳಿದ ಸಮಸ್ಯೆಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿಯ ಮುಖಂಡರಾದ ಜಿ.ಹೆಚ್. ಹನುಮೇಶ್, ಶ್ರೀಕಾಂತ್, ದುರ್ಗೇಶ್ ಉಪಸ್ಥಿದರಿದ್ದರು. ಬಿಬಿಎಂಪಿ ಆಶಾ ಮುಖಂಡರುಗಳಾದ ಫರ್ಹಾನಾ, ನಾಗಲಕ್ಷಿ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.‌

Related posts