RSS ಗೆ ಸರ್ಕಾರದ ಅಂಕುಶ, ಶುರುವಾಯಿತು “I Love Karnataka’ ಅಭಿಯಾನ

ಬೆಂಗಳೂರು: RSS ವಿರುದ್ದದ ಸಿದ್ದರಾಮಯ್ಯ ಸರ್ಕಾರದ ಪ್ರಹಾರಕ್ಕೆ ಕನ್ನಡ ಕಾರ್ಯಕರ್ತರು ತತ್ತರಗೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವ ಕ್ರಮ ಇದೀಗ ರಾಜ್ಯ ಸರ್ಕಾರಕ್ಕೆ ತಿರುಗುಬಾಣ ಎಂಬಂತಾಗಿದೆ. RSS ಮೇಲಿನ ದ್ವೇಷದ ನಡೆಯಿಂದಾಗಿ ಕನ್ನಡ ಸಂಘಟನೆಗಳೂ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

RSSಗೆ ತನ್ನ ಶಾಖೆಯನ್ನು ನಡೆಸಲು ಸಾರ್ವಜನಿಕ ಸ್ಥಳವೇ ಆಗಬೇಕೆಂದಿಲ್ಲ. ಬಹುತೇಕ ಊರುಗಳಲ್ಲಿ ಯಾರದಾದರೂ ಮನೆಗಳಲ್ಲಿ ಶಾಖೆ ಹಾಗೂ ಬೈಠಕ್’ಗಳನ್ನು ನಡೆಸಲಾಗುತ್ತದೆ. ಬಹಿರಂಗ ಸಮಾವೇಶ ಮತ್ತು ಪಾಠ ಸಂಚಲನಗಳು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆಯಾದರೂ ಅವು ವರುಷಕ್ಕೊಮ್ಮೆ ಮಾತ್ರ. ಹಾಗಾಗಿ ನಿರ್ಬಂಧದಿಂದ RSSಗೆ ಸಮಸ್ಯೆಯಾಗದು, ಆದರೆ ಇದರ ಪರಿಣಾಮ ಬೀರುವುದು ಕನ್ನಡಿಗರ ಮೇಲೆ. ಕರುನಾಡಿನ ಗಲ್ಲಿಗಲ್ಲಿಗಳಲ್ಲಿ ಕನ್ನಡ ಧ್ವಜ ಹಾರಿಸುವ ಕನ್ನಡಿಗರಿಗೆ ಸಿದ್ದರಾಮಯ್ಯ ಸರ್ಕಾರದ ಈ ದ್ವೇಷದ ನಿಯಮದಿಂದಾಗಿ ಅನ್ಯಾಯವಾಗುತ್ತದೆ. ತಮಿಳುನಾಡು ಸಹಿತ ಹಲವು ರಾಜ್ಯಗಲ್ಲಿ RSS ನಾಯಕರು ಹೈಕೋರ್ಟ್-ಸುಪ್ರೀಂಕೋರ್ಟಿಗೆ ಹೋಗಿ ಅನುಮತಿ ಪಡೆಯುತ್ತಾರೆ. ಅವರಂತೆಯೇ ನಾವು ಪ್ರತೀ ದಿನದ ಕನ್ನಡಾಭಿಮಾನಕ್ಕಾಗಿ ನಿತ್ಯವೂ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವೇ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಹಿರಿಯ ಪತ್ರಕರ್ತ ಆಲ್ವಿನ್ ಮೆಂಡೋನ್ಸಾ ಅವರು ಟ್ವೀಟ್ ಮೂಲಕ ಸರ್ಕಾರದ ರಹಸ್ಯ ಅಜೇಂಡಾವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣ ‘X’ನಲ್ಲಿ ಅವರು ಹಾಕಿರುವ ಪೋಸ್ಟ್ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

RSS ಬಗೆಗಿನ ಅಸೂಯೆಯ ಕಾರಣಕ್ಕಾಗಿ ಪ್ರಿಯಾಂಕ್ ಖರ್ಗೆಯವರು ಕನ್ನಡ ವಿರೋಧಿಯಾದರಾ ಎಂದು ಪ್ರಶ್ನಿಸಿರುವ ಆಲ್ವಿನ್ ಮೆಂಡೋನ್ಸಾ, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆ ನಿಷೇಧಿಸಿದರೆ ಅದರ ಪರಿಣಾಮ ಆಗೋದು ಕನ್ನಡ ಪ್ರೇಮಿಗಳ ಮೇಲೆ ಎಂಬುದು ಪ್ರಿಯಾಂಕಾ ಖರ್ಗೆಗೆ ಗೊತ್ತಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ನಮಗಿರುವುದು ಒಂದೇ ಕರ್ನಾಟಕ.. ಇಲ್ಲಿ ಗಲ್ಲಿಗಲ್ಲಿಗಳಲ್ಲಿ ಕನ್ನಡ ಧ್ವಜ ಹಾರುತ್ತಿರುತ್ತವೆ. ಎಲ್ಲಾ ಕನ್ನಡ ಧ್ವಜ ಸ್ತಂಭಗಳು ಸಾರ್ವಜನಿಕ ಸ್ಥಳಗಳಲ್ಲೇ ಇವೆ. ರಾಜ್ಯೋತ್ಸವ ಮಾತ್ರವಲ್ಲ, ಕನ್ನಡಾಭಿಮಾನದ ಕಾರ್ಯಕ್ರಮ ನಡೆಯುವ ಎಲ್ಲಾ ಸಂದರ್ಭಗಳಲ್ಲಿ ಕನ್ನಡ ಧ್ವಜ ಹಾರಿಸಿ ಕಾರ್ಯಕ್ರಮ ನಡೆಸುತ್ತಾ ಇರುತ್ತೇವೆ. ಇನ್ನು ಮುಂದೆ ಕನ್ನಡಿಗರು ಕನ್ನಡ ಭಕ್ತಿ ತೋರಿಸುವಂತಿಲ್ಲವೇ? ಎಂದು ಆಲ್ವಿನ್ ಮೆಂಡೋನ್ಸಾ ಪ್ರಶ್ನಿಸಿದ್ದಾರೆ.

ದಲಿತ ಸಂಘಟನೆಗಳು ಸಾರ್ವಜನಿಕ ಬೀದಿಗಳಲ್ಲೇ ಕಾರ್ಯಕ್ರಮ ನಡೆಸುತ್ತಿರುತ್ತವೆ. ಇನ್ನು ಮುಂದೆ ದಲಿತರೂ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲವೇ? ಎಂದು ಪ್ರಶ್ನೆ ಮಾಡಿರುವ ಅವರು, ಸರ್ಕಾರದ ಈ ‘ನಿರ್ಬಂಧ’ದ ಅಜೆಂಡಾ RSS ಅಲ್ಲ, ಬದಲಾಗಿ ಸರ್ಕಾರದ ವಿರುದ್ಧ ಬಂಡಾಯ ಏಳುವವರನ್ನು ಧಮನಿಸುವುದು ಪ್ರಮುಖ ಅಜೆಂಡಾ ಆಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಸರ್ಕಾರಿ ನೌಕರರೇ ಸಿಡಿದೆದ್ದು ಹೋರಾಟ ನಡೆಸುತ್ತಿದ್ದಾರೆ. ಈ ಮುಜುಗರದಿಂದ ಪಾರಾಗಲು ಮಾರ್ಗ ಹುಡುಕುತ್ತಿದ್ದ ಸರ್ಕಾರವು, ಕಾರ್ಮಿಕ ಸಂಘಟನೆಗಳ, ಕನ್ನಡ ಸಂಘಟನೆಗಳ ಚಟುವಟಿಕೆ ನಿರ್ಬಂಧಿಸುವ ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಂಡಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೌಕರರು ಸಂಘ ಸಂಸ್ಥೆಗಳಲ್ಲಿ ಭಾಗಿಯಾಗಬಾರದು ಎಂದರೆ, ಸರ್ಕಾರಿ ನೌಕರರು ಕನ್ನಡಪರ ಸಂಘಟನೆಗಳಲ್ಲಿ ಭಾಗವಹಿಸಬಾರದೇ? ದಲಿತ ಸಂಘಟನೆಗಳಲ್ಲಿ ಭಾಗವಹಿಸಬಾರದೇ? ಆಶಾ ಕಾರ್ಯಕತೆಯರ, ಅಂಗನವಾಡಿ ಕಾರ್ಯಕತೆಯರ, ಬಿಬಿಎಂಪಿ ನೌಕರರ ಸಂಘಟನೆಗಳಲ್ಲಿ ಭಾಗವಹಿಸಬಾರದೇ? ಸರ್ಕಾರಿ ನೌಕರರು ಕಾರ್ಮಿಕ ಸಂಘಟನೆಗಳಲ್ಲಿ ಭಾಗವಹಿಸಬಾರದು ಎಂದು ಅರ್ಥೈಸಬೇಕೇ ಆಲ್ವಿನ್ ಮೆಂಡೋನ್ಸಾ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಈ ರಾಜಕೀಯ ನೀತಿಯು ಕನ್ನಡ ವಿರೋಧಿ ನೀತಿಯಾಗಿ ಗಮನಸೆಳೆದಿದೆ ಎಂದು ವಿಶ್ಲೇಷಿಸಿರುವ ಅವರು, ತಂದೆ ಮಲ್ಲಿಕಾರ್ಜುನ ಖರ್ಗೆಯವರು ಹಿಂದಿ ಭಾಷಿಗ ಕಾಂಗ್ರೆಸ್ ನಾಯಕರ ಜೊತೆ ಸೇರಿದ ಮಾತ್ರಕ್ಕೆ ಇಲ್ಲಿ ಪುತ್ರನೂ ಕನ್ನಡ ವಿರೋಧಿ ನೀತಿ ಅನುಸರಿಸಿಬಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ, ಪ್ರಿಯಾಂಕ್ ಖರ್ಗೆಯವರ ನಾಡ ವಿರೋಧಿ ನೀತಿಯನ್ನು ಮಲ್ಲಿಕಾರ್ಜುನ ಖರ್ಗೆ ಒಪ್ಪುತ್ತಾರ? ಈ ನೀತಿಯು INTUC, NSUI ಸಂಘಟನೆಗಳಿಗೂ ಅನ್ವಯವಾಗುತ್ತಾ? ಎಂದವರು ಕೇಳಿರುವ ಪ್ರಶ್ನೆಗಳೂ ಚರ್ಚೆಯ ಸಂಗತಿ ಎಂಬಂತಾಗಿದೆ.

Related posts