‘ಕಸ ಸುರಿಯುವ ಹಬ್ಬ’ ಬಗ್ಗೆ ಜನಾಕ್ರೋಶ; ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರುದ್ಧ ಹಿಡಿಶಾಪ

ಬೆಂಗಳೂರು: ಒಂದಿಲ್ಲೊಂದು ವಿಚಾರಗಳಿಂದ ವಿವಾದದ ಕೇಂದ್ರಬಿಂದುವಾಗುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ಬೆಂಗಳೂರಿನ ಕಸ ಅವಾಂತರದಿಂದಾಗಿ ನಾಗರಿಕರ ಗುರಿಯಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಎಚ್ಚರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ಕೈಗೊಂಡಿರುವ “ಕಸ ಸುರಿಯುವ ಹಬ್ಬ” ನಾಗರಿಕರ ಸಹನೆಯನ್ನು ಕೆಡಿಸುವಂತಿದೆ. ಈ ಕುರಿತಂತೆ ಸಾರ್ವಜನಿಕ ವಲಯದದಲ್ಲಿ ಆಕ್ರೋಶ ಸ್ಫೋಟಗೊಂಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೆಲವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಸ್ವಚ್ಛತೆಗೆ ಸವಾಲಾಗಿದ್ದಾರೆ. ಈ ಪರಿಸ್ಥಿತಿಗೆ ಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಮಾರ್ಷಲ್’ಗಳು ಹೊಣೆಗಾರರು. ಈ ಅಧಿಕಾರಿಗಳು ಹಾಗೂ ಮಾರ್ಷಲ್’ಗಳು ಕಾರ್ಯಪ್ರವೃತ್ತರಾಗಿ, ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಬೇಕಿದೆ. ಅದಕ್ಕಾಗಿ ನಿಯಮಗಳನ್ನೂ ರೂಪಿಸಲಾಗಿದೆ. ಆದರೆ, ಅಧಿಕಾರಿಗಳ ಹಾಗೂ ಮಾರ್ಷಲ್’ಗಳ ನಿರ್ಲಕ್ಷ್ಯದ ಪರಿಣಾಮವಾಗಿ ಕೆಲವರು ಪರಿಸ್ಥಿತಿಗೆ ಸವಾಲೆಂಬಂತೆ ವರ್ತಿಸಿದ್ದಾರೆ. ಈ ಅಧಿಕಾರಿಗಳು ಈವರೆಗೂ ಎಷ್ಟು ಪರಿಣಾಮಕಾರಿ ಕೆಲಸ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿದಲ್ಲಿ ಇಲಾಖೆಯ ಕಾರ್ಯಕ್ಷಮತೆ ಗೊತ್ತಾಗಬಹುದು ಎಂಬುದು ಸಾರ್ವಜನಿಕರ ಪ್ರತಿಪಾದನೆ.

ಏನಿದು ವಿವಾದಿತ ‘ಕಸ ಸುರಿಯುವ ಹಬ್ಬ’?

ರಾಜಧಾನಿ ಬೆಂಗಳೂರಿನಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಿ ಅವರ ಮನೆಯ ವಿಳಾಸವನ್ನು ತಿಳಿಯಲಾಗುತ್ತದೆ. ಈ ಪತ್ತೆ ಕಾರ್ಯಕ್ಕಾಗಿ ಮಾರ್ಷಲ್ ಹಾಗೂ ಇತರರನ್ನು ಪಾಲಿಕೆ ನೇಮಕ ಮಾಡಿದೆ. ಕಸ ಎಸೆಯುವವರನ್ನು ಪತ್ತೆ ಮಾಡಿ, ಅಂಥವರಿಗೆ ಸಾರ್ವಜನಿಕವಾಗಿ ಮುಜುಗರವಾಗುವ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ. ಹೇಗೆಂದರೆ, ಆಟೋ ಟಿಪ್ಪರ್’ನಲ್ಲಿ ಕಸ ತಂದು ಮನೆ ಮುಂದೆ ಸುರಿಯಲಾಗುತ್ತದೆ. ಅಧಿಕಾರಿಗಳ ಈ ವೈಖರಿಯೇ ವಿವಾದ ಸೃಷ್ಟಿಸಿರುವುದು.

ಸಾರ್ವಜನಿಕರು ಒಂದು ಚೀಲ ಕಸ ಬಿಸಾಡಿದರೆ, ಅದಕ್ಕೆ ಪ್ರತಿಯಾಗಿ ಪಾಲಿಕೆ ಅಧಿಕಾರಿಗಳು ಕಸ ಎಸೆದವರ ಮನೆ ಮುಂದೆ ಒಂದು ಲೋಡ್ ತ್ಯಾಜ್ಯ ಸುರಿಯುತ್ತಾರೆ. ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಕಡೆ ಈ ರೀತಿ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮಗಳಲ್ಲೂ ಈ ಕುರಿತ ಸರಣಿ ವೀಡಿಯೋಗಳನ್ನು ಗೇಟರ್ ಬೆಂಗಳೂರು ಪ್ರಾಧಿಕಾರ ತನ್ನ ಅಧಿಕೃತ ‘X’ ಖಾತೆಯಲ್ಲಿ ಹಂಚಿಕೊಂಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತನ್ನ ಈ ಕಾರ್ಯಾಚರಣೆಯನ್ನು ‘ಅಭಿಯಾನ’ ಎಂದು ಹೇಳಿಕೊಂಡಿದೆ. ಅದನ್ನು ‘ಕಸ ಸುರಿಯುವ ಹಬ್ಬ’ ಎಂದೂ ಹೇಳಿಕೊಂಡಿದೆ. ವಾಸ್ತವದಲ್ಲಿ ಈ ರೀತಿಯ ಕಾರ್ಯಾಚರಣೆಗೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ತಿಳಿಯುವ ಪ್ರಯತ್ನಕ್ಕೂ ಅಧಿಕಾರಿಗಳು ಮುಂದಾಗಿಲ್ಲವೇನೋ..!

ಯಾರೋ ತ್ಯಾಜ್ಯ ಸುರಿದರೆಂಬ ಕಾರಣಕ್ಕೆ ಒಂದು ಲೋಡ್ ತ್ಯಾಜ್ಯವನ್ನು ಪಾಲಿಕೆ ಅಧಿಕಾರಿಗಳು ಸುರಿದು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಕಸ ಸುರಿದವನು ಕಟ್ಟಡದ 3-4ನೇ ಮಹಡಿಯ ಮನೆಯ ನಿವಾಸಿಯಾಗಿದ್ದರೆ, ಪಾಲಿಕೆ ಅಧಿಕಾರಿಗಳು ತ್ಯಾಜ್ಯ ಸುರಿಯುವುದು ಆ ಮನೆಯಿರುವ ಕಟ್ಟಡದ ಮುಂದೆಯೇ ಹೊರತು ಕಸ ಸುರಿದವನ ಮನೆಗಲ್ಲ. ತಮ್ಮ ಈ ನಡೆಯಿಂದ ಆ ಕಟ್ಟದಲ್ಲಿ ವಾಸವಿರುವ ನಿವಾಸಿಗಳಿಗಷ್ಟೇ ಅಲ್ಲ, ಆ ಪ್ರದೇಶದ ಅಕ್ಕಪಕ್ಕದ ನಿವಾಸಿಗಳಿಗೂ ತೊಂದರೆ ಆಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಅಧಿಕಾರಿಗಳು ವರ್ತಿಸಿದ್ದಾರೆ.

ಈ ರೀತಿಯ ಕಾರ್ಯಾಚರಣೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿಯ ಕ್ರಮವನ್ನು ಕಾನೂನಿನಲ್ಲಿ ‘ಸಾರ್ವಜನಿಕ ಉಪದ್ರವ’ (‘public nuisance’) ಎಂದು ಪರಿಗಣಿಸಿ, ಅದಕ್ಕೆ ಕಾರಣರಾದವರ ವಿರುದ್ಧ ಕರ್ತವ್ಯಲೋಪ ಆರೋಪದಲ್ಲಿ ಸರ್ಕಾರ ಕ್ರಮ ಜರುಗಿಸಬಹುದು ಎಂದು ಕಾನೂನು ತಜ್ಞರು ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪಾಲಿಕೆ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರರೂ ಆದ ಪತ್ರಕರ್ತ ಆಲ್ವಿನ್ ಮೆಂಡೋನ್ಸಾ, ಯಾರೋ ಒಬ್ಬ ಬಾಡಿಗೆದಾರ ತಪ್ಪು ಮಾಡಿರಬಹುದು. ಅದಕ್ಕಾಗಿ ಇಡೀ ಪರಿಸರದವರಿಗೆ ಶಿಕ್ಷೆಯೇ? ಎಂದು ಪ್ರಶ್ನಿಸಿದ್ದಾರೆ. ತಪ್ಪು ಮಾಡಿದವರಿಗೆ ದಂಡ ವಿಧಿಸುವ ಬಗ್ಗೆ ಕಾನೂನು ಇರುವಾಗ ಸರ್ಕಾರವೇ ಈ ರೀತಿ ವರ್ತಿಸುವುದು ಸರಿಯೇ? ಸರ್ಕಾರವೇ ಕಸ ಸುರಿಯುವುದೆಂದರೆ, ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆಯೇ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಆಲ್ವಿನ್ ಮೆಂಡೋನ್ಸಾ, ‘ಗ್ರೇಟರ್ ಬೆಂಗಳೂರು’ ಅಧಿಕಾರಿಗಳೇ ಈ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಸರ್ಕಾರ ಇದನ್ನು ಒಪ್ಪಿಕೊಂಡಂತಿದೆ. ಆದರೆ, ಪ್ರತಿಪಕ್ಷ ನಾಯಕರಾದವರು ಇದನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ‘X’ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ “ಕಸ ಸುರಿಯುವ ಹಬ್ಬ”ದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

ಕಸ ಎಸೆದಿರುವವರ ಮಂಡೆ ಮುಂದೆ ತ್ಯಾಜ್ಯ ಸುರಿದು ಅನಂತರ ಸ್ವಚ್ಛಗೊಳಿಸಲಾಗಿದೆ. ಜೊತೆಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Related posts