ಶಹಬ್ಬಾಸ್ ರೂಪ.. ಪ್ರಭಾವಿಗಳಲ್ಲೇ ನಡುಕ ಹುಟ್ಟಿಸಿದ ಐಜಿಪಿಗೆ ಅಭಿನಂದನೆಗಳ ಮಹಾಪೂರ

ಬೆಂಗಳೂರು: ರಾಜ್ಯದಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿದೆ. ಈ ಸಂಕಟ ಕಾಲದಲ್ಲಿ ಜನರ ನೆರವಿಗೆ ಧಾವಿಸಿರುವ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಹೀಗಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ವೆಚ್ಚವನ್ನು ಪಾವತಿಸುವಂತೆ ರೋಗಿಗಳಿಗೆ ಒತ್ತಾಯಿಸುವ ದೂರುಗಳೂ ಕೇಳಿಬರುತ್ತಿವೆ. ಈ ಪೈಕಿ ಬೆಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆ 20 ಕ್ಕೂ ಹೆಚ್ಚು ಕೋವಿಡ್-19 ಸೋಂಕಿತರಿಂದ ಹೆಚ್ಚುವರಿ ಶುಲ್ಕ ಪಡೆದಿರುವ ದೂರುಗಳು ಸರ್ಕಾರದ ಗಮನಸೆಳೆದಿದೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಮಹಾ ನಿರೀಕ್ಷಕಿ ಡಿ.ರೂಪಾ ಅವರು ಕಾರ್ಯಾಚಣೆಯ ಅಖಾಡಕ್ಕೆ ಧುಮುಕಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು, ಖಾಸಗಿ ಆಸ್ಪತ್ರೆಗಳ ಅಕ್ರಮಗಳ ವಿರುದ್ಧ ಸಮರಕ್ಕೆ ಮುಂದಾದರು. ಅಧಿಕಾರಿಗಳ ತಂಡವನ್ನು ಆಸ್ಪತ್ರೆಗಳಿಗೆ ಕಳುಹಿಸಿ ಸತ್ಯಾಸತ್ಯತೆಗಳನ್ನು ಪರಾಮರ್ಶೆ ನಡೆಸಿದರು.

ಅಕ್ರಮ ಮೇಲ್ನೋಟಕ್ಕೆ ತಿಳಿದಿದ್ದೇ ತಡ, ಸಿಡಿಮಿಡಿಗೊಂಡ ಐಜಿಪಿ ಡಿ.ರೂಪಾ ಅವರು ಆಸ್ಪತ್ರೆಗಳಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳಿಂದ ನಡೆಸಲ್ಪಡುವ ಆಸ್ಪತ್ರೆ ಅದಾಗಿದ್ದರೂ ಅದರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಖಡಕ್ಕಾಗಿ ನಿಂತರು.

ಈ ಸಂದೇಶ ತಲುಪಿದ್ದೇ ತಡ, ಕೊರೋನಾ ಚಿಕಿತ್ಸೆ ಸಲುವಾಗಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ ಸುಮಾರು 24 ಲಕ್ಷ ರೂಪಾಯಿಗಳನ್ನು ಆಸ್ಪತ್ರೆ ಹಿಂತಿರುಗಿಸಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಐಜಿಪಿ ಡಿ.ರೂಪಾ, ಕೋವಿಡ್ ಚಿಕಿತ್ಸೆಗೆ ಹಣ ಪಾವತಿ ಮಾಡಿದ್ದನ್ನು ಆಸ್ಪತ್ರೆಯವರು ವಾಪಾಸ್ ಕೊಟ್ಟು ಉಚಿತ ಚಿಕಿತ್ಸೆ ನೀಡಿರುತ್ತಾರೆ. ಜನಸಾಮಾನ್ಯರಿಗೆ ಬಹಳ ಉಪಯೋಗವಾಗಿದೆ. ನಮ್ಮ ಟೀಂ ಹರ್ಷಗುಪ್ತ ಐಎಎಸ್, ಅಶೋಕ್ ಗೌಡ, ಒಳಗೊಂಡಂತೆ ಟೀಂ ಪರಿಶ್ರಮ ಸಾರ್ಥಕವಾಗಿದೆ ಎಂದಿದ್ದಾರೆ.

ಈ ರೂಪಾ ಅವರ ಈ ಕ್ಷಿಪ್ರ ಕ್ರಮ ಖಾಸಗಿ ಆಸ್ಪತ್ರೆ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳಾದ ಹರ್ಷಾ ಗುಪ್ತಾ ಹಾಗೂ ಡಿ.ರೂಪಾ ಅವರಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

ಇದನ್ನೂ ಓದಿ.. ನಟಿ ಸುಧಾರಾಣಿಗೂ ವೈದ್ಯರ ರಗಳೆ; ಖಾಸಗಿ ಆಸ್ಪತ್ರಗೆ ಎಚ್ಚರಿಕೆ ನೀಡಿದ ಸರ್ಕಾರ 

 

Related posts