ಬೆಂಗಳೂರು: ಈಗ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಬೆಳೆದು ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಹೀರೋ ಆಗಲು ಸಾಧ್ಯವೇ ಇಲ್ಲ. ಅವರು ಎಂದಿಗೂ ವಿಲನ್.. ಕಾಂಗ್ರೆಸ್ ಪಕ್ಷದ ಒಂದು ವರ್ಗಕ್ಕೂ ಸಿದ್ದರಾಮಯ್ಯ ವಿಲನ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮುಂದೆ ಕೂಡ ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತ ಸ್ಥಿತಿಗೆ ಬರುವ ಕಾಲ ಬಹಳ ದೂರವಿಲ್ಲ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.
ಜೆಡಿಎಸ್ ಬಡವರು, ಶ್ರಮಿಕರು, ರೈತರು ಬೆಳೆಸಿದ ಪಕ್ಷ. ನಮ್ಮ ಹೊಣೆಗಾರಿಕೆ ಏನಿದ್ದರೂ ಜನರದ್ದು, ನಾವು ಅಂಬಾನಿ, ಆದಾನಿಗೆ ನಮ್ಮ ಪಕ್ಷದ ಜವಾಬ್ದಾರಿ ನೀಡಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ನಾವು ಟಿಕೆಟ್ ನೀಡಿದ್ದೇವೆ. ಜೆಡಿಎಸ್ನ್ನು ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ ಎಂದು ಹೇಳಿದರು.
ಕೊರೊನಾ ಬಂದಾಗ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಅಂದ್ರು, ಆಮೇಲೆ ದೀಪ ಬೆಳಗಿಸಿ ಅಂದ್ರು. ಆ ದೀಪ ಹಚ್ಚಿ ಬಿಜೆಪಿಯವರು ತಮ್ಮ ಜೀವನ ಬೆಳಗಿಸಿಕೊಂಡ್ರು. ಜನರ ಕಷ್ಟಗಳಿಗೆ ದೀಪ ಹಚ್ಚಿ ಬೆಳಕು ನೀಡಲಿಲ್ಲ ಎಂದ ಅವರು, ಹತ್ತು ವರ್ಷದಿಂದ ಬಿಜೆಪಿ, ಕಾಂಗ್ರೆಸ್ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಪ್ರತಿವರ್ಷ ಕಾಲುವೆ ದುರಸ್ಥಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೂ, ಮಳೆ ಬಂದಾಗ ಬೆಂಗಳೂರಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.