ಮೋಡಗಳ ನಡುವೆ ‘ಕಾರಿಂಜೆ ಕ್ಷೇತ್ರ’ ಹೇಗಿದೆ ಗೊತ್ತಾ?

ಮಂಗಳೂರು: ಕರಾವಳಿಯಲ್ಲಿರುವ ಆಸ್ತಿಕರ ಪಾಲಿಗೆ ದಕ್ಷಿಣ ಕಾಶಿ ಎಂದೇ ಗುರುತಾಗಿರುವ ಕಾರಿಂಜೇಶ್ವರ ಕ್ಷೇತ್ರ ಪ್ರಕೃತಿಯ ಸುಂದರ ಉಡುಗೊರೆಯಲ್ಲದೆ ಬೇರೇನೂ ಅಲ್ಲ. ಮುಗಿಲೆತ್ತರದ ಈ ಏಕಶಿಲಾ ಬೆಟ್ಟದ ಮೇಲೆ ಪರಮೇಶ್ವರ ಸಾನ್ನಿಧ್ಯವಹಿಸಿದ್ದು ಈ ಪುಣ್ಯಕ್ಷೇತ್ರ ಭಕ್ತರ ಪಾಲಿನ ಸ್ವರ್ಗ.

ಬೆಟ್ಟಹತ್ತಿ ದೇಗುಲಕ್ಕೆ ತೆರಳುವುದೇ ಸಾಹಸ. ಗರ್ಭಗುಡಿಯೊಳಗಿನ ಕಾರಿಂಜೇಶ್ವರನನ್ನು ಕಂಡಾಗ ಅದೇನೋ ಪುನೀತ ಭಾವ. ಈ ಅನುಭವ ಇತರೆಡೆಗಳಿಗಿಂತ ವಿಭಿನ್ನ ಎಂಬುದು ಹಲವರ ಅಭಿಪ್ರಾಯ.

ಶ್ರೀ ಕಾರಿಂಜೇಶ್ವರ ಕ್ಷೇತ್ರವು ‘ಬೆಟ್ಟ ಒಂದು: ಹಲವು ಜಗತ್ತು’ ಎಂಬಂತಿದೆ. ರಾಮಾಯಣ ಮಹಾಭಾರತ ಕಾಲದ ಹಲವು ಪುರಾಣ ಪ್ರಸಂಗಗಳಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ ಎಂಬುದು ಹಲವರ ನಂಬಿಕೆ. ಬೇಸಿಗೆಯ ಬಿರುಬಿಸಿಲ ಕಾಲದಲ್ಲೂ ‘ಉಂಗುಷ್ಠ ತೀರ್ಥ’ದ ಪುಟ್ಟ ಗುಂಡಿಯಲ್ಲಿ ಜೀವಜಲ ಸಿಗುವ ಮಹಿಮೆಯೂ ಭಕ್ತರ ಕುತೂಹಲದ ಕೇಂದ್ರಬಿಂದು.

ಅದರಲ್ಲೂ ಮಳೆಗಾಲ ಕಳೆದಾಕ್ಷಣದ ಚುಮುಚುಮು ಚಳಿಯ ಕಾಲದಲ್ಲಿ, ಬೆಳ್ಳಂಬೆಳಿಗ್ಗೆ ಬೆಟ್ಟದೆತ್ತರದಲ್ಲಿ ಸಾಗುವ ಮೋಡಗಳ ಸಾಲನ್ನು ನೋಡುವುದೇ ಚೆಂದ. ಬೆಟ್ಟಕ್ಕೆ ಶ್ವೇತ ಹೊದಿಕೆಯಾಗುವ ಮೋಡಗಳ ಎಡೆಯಲ್ಲಿ ಅವಿತ ಅನುಭವವೂ ಬೆಟ್ಟವೇರಿದ ಮಂದಿಗೆ ಸೊಗಸು.. ಆ ಕ್ಷಣದ ದೃಶ್ಯ ವೈಭವವೂ ಅನನ್ಯ..

 

Related posts