ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾರಾಜ್ಯವಾದೀತು ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿರುದ್ದ ಕಾಂಗ್ರೆಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಸದ್ಯರಾದ ತೇಜಸ್ವಿ ಸೂರ್ಯ ಮತ್ತು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾದ ಗೌರವ್ ಭಾಟಿಯಾರವರು 03-05-2023 ರಂದು ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೂಂಡಾ ರಾಜ್ಯ, ಮಾಫಿಯಾ ರಾಜ್ಯ, ಇಸ್ಲಾಮೀಕರಣ ಮತ್ತು ಭಯೋತ್ಪಾದನಾ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ.
ಈ ಬಗ್ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ತೇಜಸ್ವಿ ಸೂರ್ಯ ಹಾಗೂ ಗೌರವ್ ಭಾಟಿಯಾರವರು ನಮ್ಮ ಪಕ್ಷದ ವಿರುದ್ಧ ಸುಳ್ಳು ಮತ್ತು ದ್ವೇಷಪೂರಿತ ಆರೋಪವನ್ನು ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಮೇಲೆ ಇವರು ಮಾಡಿರುವ ಗುರುತರವಾದ ಮತ್ತು ದ್ವೇಷಪೂರಿತವಾದ ಆರೋಪವು ರಾಜಕೀಯ ಪ್ರೇರಿತವಾಗಿದ್ದು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ನಾಯಕರನ್ನು ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿರುತ್ತದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ನಾಯಕರ ಹೇಳಿಕೆಯು ಚುನಾವಣಾ ಆಯೋಗದ ನೀತಿನಿಯಮಗಳಿಗೆ ಮತ್ತು ಮಾದರಿ ನೀತಿಸಂಹಿತೆಗೆ ವಿರುದ್ಧವಾಗಿದ್ದು, ಮತದಾರರಲ್ಲಿ ಮತ್ತು ಜನಸಾಮಾನ್ಯರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಚೋಧನೆ ಮಾಡುವ ದುರುದ್ದೇಶದಿಂದ ಕೂಡಿರುತ್ತದೆ. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ತಪ್ಪು ಮಾಹಿತಿ ನೀಡಿ ಭಯದ ವಾತಾವರಣವನ್ನು ಉಂಟುಮಾಡುವ ಒಳಸಂಚಿನ ಭಾಗವಾಗಿದ್ದು, ಇಂತಹ ಹೇಳಿಕೆಯ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೆಹೋದರೆ ಇವರು ಮತದಾರರ ದಾರಿ ತಪ್ಪಿಸುತ್ತಾರೆ ಎಂದು ದೂರಿನಲ್ಲಿ ಗಮನಸೆಳೆದಿದ್ದಾರೆ.
ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದು, ಯಾವುದೇ ಹೇಳಿಕೆಯನ್ನು ಬೇಜವಾಬ್ದಾರಿಯಿಂದ ನೀಡಬಾರದು. ಆದರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಗುರಿಯಾಗಿಸಿಕೊಂಡು ಚುನಾವಣಾ ಸಮಯದಲ್ಲಿ ಮತದಾರರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಘಟನೆಗಳನ್ನು ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚೋದಿಸುವ ಕಾರಣಕ್ಕಾಗಿ ಇಂತಹ ಹೇಳಿಕೆಯನ್ನು ನೀಡಿರುತ್ತಾರೆ. ಇವರ ಪತ್ರಿಕಾಗೋಷ್ಠಿಯು ಜನರನ್ನು ಪ್ರಚೋದನೆ ಮಾಡುವ ಉದ್ದೇಶದಿಂದ ಮತ್ತು ಕಾಂಗ್ರೆಸ್ ಪಕ್ಷದ ಗೌರವಕ್ಕೆ ದಕ್ಕೆ ತರುವ ಉದ್ದೇಶದಿಂದ ಕೂಡಿರುತ್ತದೆ ಎಂದು ದೂರಿದ್ದಾರೆ.
ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ವಕ್ತಾರರಾದ ಗೌರವ್ ಭಾಟಿಯಾರವರು ಧರ್ಮಾಧಾರಿತವಾಗಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂಬ ದುರುದ್ದೇಶಪೂರಿತ ಆರೋಪ ಮಾಡಿ ಕಾಂಗ್ರೆಸ್ ಪಕ್ಷ ಧರ್ಮ ವಿರೋಧಿ ಎಂಬ ಸಂದೇಶ ನೀಡಲು ಪ್ರಯತ್ನಿಸಿರುತ್ತಾರೆ.ಇವರ ಹೇಳಿಕೆಗಳು ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಈ ಹೇಳಿಕೆಗಳು ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿಗೆ ವಿರುದ್ಧವಾಗಿದೆ. ಕಾಂಗ್ರೆಸ್ ಪಕ್ಷವನ್ನು ತೇಜೋವದೆ ಮಾಡುವ ಮತ್ತು ಕಾಂಗ್ರೆಸ್ ಪಕ್ಷದ ಹೆಸರಿಗೆ ಮಸಿ ಬಳೆಯುವ ವ್ಯವಸ್ಥಿತ ಸಂಚಾಗಿರುತ್ತದೆ ಎಂದು ಆರೋಪಿಸಿರುವ ರಮೇಶ್ ಬಾಬು, ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ವಕ್ತಾರರಾದ ಗೌರವ್ ಭಾಟಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಿಂದ ಈ ನಾಯಕರನ್ನು ಬಹಿಷ್ಕರಿಸಬೇಕೆಂದು ಮನವಿ ಮಾಡಿದ್ದಾರೆ.