ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ. ಯೋಜನೆ ವಿರೋಧಿಸಿ ನೆರೆಯ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಸರ್ಕಾರದ ಅಡ್ವೋಕೇಟ್ ಜನೆರಲ್ ಕೆ ಶಶಿಕಿರಣ್ ಶೆಟ್ಟಿ, ರಾಜ್ಯದ ಪಾಲಿಗೆ ಇದೊಂದು ಅಭೂತಪೂರ್ವ ಗೆಲುವಾಗಿದೆ. ಸರ್ಕಾರದ ದಿಟ್ಟ ನಿಲುವು, ಕಾನೂನು ತಜ್ಞರ ನಿರಂತರ ಪರಿಶ್ರಮದಿಂದಾಗಿ ಈ ಗೆಲುವು ಲಭಿಸಿದೆ ಎಂದಿದ್ದಾರೆ.
ಕಳೆದ ಏಳು ವರ್ಷಗಳಿಂದ ತಮಿಳುನಾಡು ಈ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿತ್ತಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆ ಮುಂದುವರೆಯಲು ಹಾದಿ ಸುಲಭವಾದಂತಾಗಿದೆ ಎಂದು ಕೆ ಶಶಿ ಕಿರಣ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಯು ಪರಿಸರಸ್ನೇಹಿ ಯೋಜನೆಯಾಗಿದ್ದು, ಇದರಿಂದ ನೆರೆ ರಾಜ್ಯಕ್ಕೆ ತೊಂದರೆ ಆಗದು. ಅಷ್ಟೇ ಅಲ್ಲ, ಈ ಯೋಜನೆಯಿಂದ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯ ಸಿಗುತ್ತದೆ. ಆದಾಗಿಯೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂಗೀಕರಿಸಿದ ಆದೇಶದ ಪ್ರಕಾರ ಮಾಡಲಾಗುತ್ತಿರುವುದು ಕೇವಲ ವಿಸ್ತೃತ ಯೋಜನಾ ವರದಿ ತಯಾರಿಕೆ ಅಷ್ಟೇ ಆಗಿದೆ. ಇದರಲ್ಲಿ ತಮಿಳುನಾಡಿನ ಹಿತಾಸಕ್ತಿಯನ್ನು ಕಡೆಗಣಿಸಲಾಗಿಲ್ಲ ಎಂದು ಕೆ ಶಶಿ ಕಿರಣ್ ಶೆಟ್ಟಿ ಅವರು ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ವಕೀಲರ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇದು ಸರ್ಕಾರದ ದೃಢ ನಿಲುವು ಹಾಗೂ ಇಡೀ ಕಾನೂನು ತಂಡದ ಪ್ರಯತ್ನದ ಫಲವಾಗಿದೆ ಎಂದ ಶಶಿಕಿರಣ್ ಶೆಟ್ಟಿ, ಈ ಕಾನೂನು ಹೋರಾಟಕ್ಕೆ ಶಕ್ತಿ ತುಂಬಿದ ವಕೀಲರ ತಂಡವನ್ನು ಅಭಿನಂಧಿಸಿದ್ದಾರೆ.
