ಮಂಗಳೂರು : ಬಂದರು ನಗರಿಯ ಕೊಂಚಾಡಿಯಲ್ಲಿರುವ ಕಾಶೀ ಮಠದಲ್ಲಿ ಇದೀಗ ವಿಶೇಷ ಉತ್ಸವ ಕಾಲ. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರು ಈ ಕ್ಷೇತ್ರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ.
ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮಂಗಳವಾರ ನೂಲ ಹುಣ್ಣಿಮೆ- ಋಗುಪಾಕರ್ಮ ಪ್ರಯುಕ್ತ ವಿಶೇಷ ಕೈಂಕರ್ಯ ನೆರವೇರಿತು. ಚಾತುರ್ಮಾಸ ನಿರತ ಶ್ರೀಗಳವರು ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ವೈದಿಕ ವಿಧಿ ವಿಧಾನದೊಂದಿಗೆ ಪೂಜಿಸಲ್ಪಟ್ಟ ಪವಿತ್ರ ನೂಲನ್ನು ತೊಡಿಸಿದರು. ಬಳಿಕ ನೆರೆದ ಸಮಾಜ ಬಾಂಧವರಿಗೆ ಯಜ್ನೋಪವೀತಧಾರಣೆ ಶ್ರೀಗಳವರ ಸಾರಥ್ಯದಲ್ಲಿ ನೆರವೇರಿತು.
ಶ್ರಾವಣ ಶುದ್ಧ ಪೌರ್ಣಮಿ (ನೂಲ ಹುಣ್ಣಿಮೆಯ)ಯಂದು ಆಚರಿಸಲಾಗುವ ಯಜ್ಞೋಪವೀತ ಧಾರಣೆ ನಗರದ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ನಗರದ ಗೌಡ ಸಾರಸ್ವತ ಸಮಾಜದ ವಿವಿಧ ದೇವಳಗಳಲ್ಲೂ ನೆರವೇರಿತು.