ಕೃಷ್ಣಾ, ಮಹಾದಾಯಿ ವಿವಾದ: ಸರ್ಕಾರದ ವೈಫಲ್ಯ ವಿರುದ್ದ ಸರಣಿ ಹೋರಾಟಕ್ಕೆ ಕಾಂಗ್ರೆಸ್ ತಯಾರಿ

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ನಾಡು-ನುಡಿ ವಿಚಾರದತ್ತ ರಾಜಕೀಯ ಪಕ್ಷಗಳು ಗಮನ ಕೇಂದ್ರೀಕರಿಸಿವೆ. ಇದೀಗ ನದಿ ನೀರು ಹಂಚಿಕೆ ವಿವಾದವನ್ನು ಮುಂದಿಟ್ಟು ಅಖಾಡಕ್ಕೆ ಧುಮುಕಲು ಕಾಂಗ್ರೆಸ್ ತಯಾರಿ ನಡೆಸಿದೆ.

ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಿ.30 ರಂದು ಬಿಜಾಪುರದಲ್ಲಿ ಕೃಷ್ಣಾ ನದಿ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ. ಜ.2ರಂದು ಮಹದಾಯಿ ವಿಚಾರದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು. ಸರ್ಕಾರ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಜ.8 ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಕೈ ನಾಯಕರ ಒಗ್ಗಟ್ಟು ಪ್ರದರ್ಶನ..

ನಾನು ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು. ಭಾರತ ಜೋಡೋ ಯಾತ್ರೆ ಸಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು. ಈ ಪ್ರವಾಸದ ನಂತರ 224 ಕ್ಷೇತ್ರಗಳಲ್ಲೂ ಪ್ರತ್ಯೇಕವಾಗಿ ಪ್ರವಾಸ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಹಾಗೂ ದಕ್ಷಿಣ ಭಾಗದಲ್ಲಿ ನಾನು ಪ್ರವಾಸ ಮಾಡುತ್ತೇನೆ. ನಂತರ ಅವರು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಾಡುತ್ತಾರೆ. ನಾನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೋಗುತ್ತೇನೆ. ಈ ಪ್ರವಾಸದಲ್ಲಿ ಕೇವಲ ನಾವಿಬ್ಬರೂ ಮಾತ್ರವಲ್ಲ, ನಮ್ಮ ಪಕ್ಷದ ಎಲ್ಲ ಹಿರಿಯ ನಾಯಕರು ಭಾಗವಹಿಸುತ್ತಾರೆ. ಈ ರೀತಿ 224 ಕ್ಷೇತ್ರಗಳಲ್ಲೂ ನಾವು ಪ್ರವಾಸ ಮಾಡುತ್ತೇವೆ ಎಂದು ಡಿಕೆಶಿ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ನಾವು ನಮ್ಮ ನಾಯಕರ ಜತೆ ಚರ್ಚೆ ಮಾಡಿ ಪ್ರವಾಸದ ಪ್ರಯಾಣ ನಕ್ಷೆ ಅಂತಿಮಗೊಳಿಸಲಾಗುವುದು. ಮಾಧ್ಯಮಗಳು ನಾವು ಹೆಲಿಕಾಪ್ಟರ್ ಪ್ರವಾಸ ಮಾಡುವುದಾಗಿ ವರದಿ ಮಾಡಿವೆ. ನಮಗೆ ಇನ್ನು ಆ ಸಂದರ್ಭ ಬಂದಿಲ್ಲ. ಚುನಾವಣೆ ಸಮಯದಲ್ಲಿ ಕೆಲವೊಮ್ಮೆ ತುರ್ತಾಗಿ ಪ್ರವಾಸ ಮಾಡುವಾಗ ಹೆಲಿಕಾಪ್ಟರ್ ಬಳಸಲಾಗುವುದು. ಆದರೆ ಅದು ಹೆಲಿಕಾಪ್ಟರ್ ಯಾತ್ರೆ ಇಲ್ಲ. ನಾವು ಜನರಿಗಾಗಿ, ಜನರಿಗೋಸ್ಕರ, ಜನರ ಮಧ್ಯೆ, ಅವರ ಧ್ವನಿಯಾಗಿ ಅವರ ವಿಚಾರ ಅರಿತು ಚುನಾವಣೆಗೆ ತಯಾರಾಗುತ್ತಿದ್ದೇವೆ’ ಎಂದು ತಿಳಿಸಿದರು.

Related posts