KSRTCಗೆ ಬಲ ತುಂಬಿದ ‘ಶಕ್ತಿ’ ಯೋಜನೆ: ಮತ್ತಷ್ಟು ಬಸ್ಸುಗಳ ಸೇರ್ಪಡೆಗೆ ಸರ್ಕಾರದ ಕ್ರಮ

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಕರುಣಿಸಿರುವ ಶಕ್ತಿ ಯೋಜನೆಯಿಂದಾಗಿ ರಾಜ್ಯದ ಹೆಮ್ಮೆಯ ಸರ್ಕಾರಿ ಸಾರಿಗೆ ಸಂಸ್ಥೆ KSRTCಗೆ ಬಲ ಹೆಚ್ಚಿದೆ. ನಿಗಮದ ಬಸ್ಸುಗಳಲ್ಲಿ ಪ್ರತಿದಿನ ಸರಾಸರಿ 84.15 ಲಕ್ಷದಷ್ಟಿದ್ದ ಪ್ರಯಾಣಿಕರ ಸಂಖ್ಯೆ ಪ್ರಸಕ್ತ ‘ಶಕ್ತಿ’ ಯೋಜನೆ ಜಾರಿ ನಂತರ, ಪ್ರತಿ ದಿನ ಸರಾಸರಿ 1 ಕೋಟಿ 5 ಲಕ್ಷಕ್ಕೆ ಹೆಚ್ಚಿದೆ. ಇದು ಸಾರಿಗೆ ನಿಗಮದ ಯಶೋಗಾಥೆಗೂ ಕಾರಣವಾಗಲಿದೆ. ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗೆ ಹೆಚ್ಚುವರಿ ಬಸ್ಸುಗಳ ಸೇರ್ಪಡೆಗೆ ಸರ್ಕಾರ ಕ್ರಮ ಕೈಗೊಳ್ಲಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಏಕ ಸದಸ್ಯ ಸಮಿತಿ ಅಧ್ಯಕ್ಷ ಎಂ.ಆರ್ ಶ್ರೀನಿವಾಸಮೂರ್ತಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ‌‌ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಉಪಸ್ಥಿತಿಯಲ್ಲಿ ನಡೆಸಿದ ಸಭೆ ಕುತೂಹಲದ ಕೇಂದ್ರಬಿಂದುವಾಯಿತು. .

ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಆಯೋಗವು ಸರ್ಕಾರಕ್ಕೆ ನೀಡಿರುವ ವರದಿ ಕುರಿತಂತೆ ಆಯೋಗದ ಮುಖ್ಯಸ್ಥರು ಸಾರಿಗೆ ಸಚಿವರಿಗೆ ತಮ್ಮ ವರದಿಯ ಪ್ರಮುಖ ಅಂಶಗಳನ್ನು ಸಂಕ್ಷಿಪ್ತ ಪ್ರಾತ್ಯಕ್ಷಿತೆಯ‌ ಮೂಲಕ‌ ವಿವರಿಸಿದರು. ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ ನೀಡಿದಂತಾಗಿದೆ. ಈ‌ ಯೋಜನೆ ಜಾರಿಗೆ ಮೊದಲು ಸಾರಿಗೆ ಸಂಸ್ಥೆಗಳ‌‌ ಒಟ್ಟು ಪ್ರಯಾಣಿಕರ‌ ಸಂಖ್ಯೆ ಪ್ರತಿದಿನ ಸರಾಸರಿ 84.15 ಲಕ್ಷಗಳಿದ್ದು, ಇದೀಗ ಸರಾಸರಿ 1 ಕೋಟಿ 5 ಲಕ್ಷಗಳಾಗಿರುವುದು ‘ಶಕ್ತಿ’ ಯೋಜನೆ ಯಶಸ್ವಿಯಾಗಿದೆಯೆಂದು ತಿಳಿಸಿದರು‌. ಮುಂದುವರಿದ ದೇಶಗಳಲ್ಲಿ ಸಹ ಸಾರ್ವಜನಿಕ‌ ಸಾರಿಗೆಗೆ ಒತ್ತು ನೀಡಲು ಹಲವು ಮಹತ್ತರ‌‌‌ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗೆಗಿನ ಮಾಹಿತಿಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಮಂತ್ರಿ ರಾಮಲಿಂಗಾ ರೆಡ್ಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುಕೂಲವಾಗುವ ತುರ್ತು‌ ಕ್ರಮಗಳಾದ ಹೊಸ ಬಸ್ಸುಗಳ ಸೇರ್ಪಡೆ, (Refurbishing ) ಬಸ್ಸುಗಳ ಪುನಶ್ಚೇತನ ಕಾರ್ಯ, ಪರಿಣಾಮಕಾರಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿ‌ ಉಪಕ್ರಮಗಳು, ಸಿಬ್ಬಂದಿ ನೇಮಕ ಹಾಗೂ ಇತರೆ ಅಗತ್ಯ ವಿಷಯಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.

ಸಂಪನ್ಮೂಲ‌ ನಗದೀಕರಣದ ಬಗ್ಗೆ ಕೂಡಲೇ ಕ್ರಿಯಾ ಯೋಜನೆಯನ್ನು ತಯಾರಿಸಿ, ನಾಲ್ಕು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ‌ ಉದ್ದೇಶಕ್ಕಾಗಿ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆ ಎಸ್ ಆರ್ ಟಿ ಸಿ‌ ವ್ಯಾಪ್ತಿಯ ವಿಭಾಗ ಹಾಗೂ ಕಾರ್ಯಾಗಾರಗಳಲ್ಲಿ 460 ಕ್ಕೂ ಹೆಚ್ಚು Refurbishing ಬಸ್ಸುಗಳನ್ನ ನಿರ್ಮಿಸಿರುವುದಕ್ಕೆ ಪ್ರಶಂಸಿಸಿದ ಸಚಿವರು, ಈ‌ ಕಾರ್ಯವು ಎಲ್ಲಾ ಸಂಸ್ಥೆಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಯಬೇಕೆಂದು ತಿಳಿಸಿದರು. ಇದೇ ವೇಳೆ, ಸಾರಿಗೆ ಸಂಸ್ಥೆಗಳ‌ ಬಸ್‌ ನಿಲ್ದಾಣಗಳಲ್ಲಿ ಸ್ವಚ್ವತೆಯನ್ನು ಕಾಪಾಡಬೇಕು, ಪ್ರಮುಖವಾಗಿ ಆಸನಗಳ‌ ವ್ಯವಸ್ಥೆ, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳ‌ ಬಗ್ಗೆ ಗಮನಹರಿಸಲು ಸೂಚಿಸಿ, ತಾವೇ ಖುದ್ದು ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು. ಅಧಿಕಾರಿಗಳು ಸಹ ಬಸ್ ನಿಲ್ದಾಣಗಳಿಗೆ ಆಗಾಗ್ಗೆ ಭೇಟಿ ನೀಡಬೇಕೆಂದು ತಾಕೀತು ಮಾಡಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ, ವಾಕರಸಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್.,  ನಿಗಮದ ನಿರ್ದೇಶಕ (ಸಿಬ್ಬಂದಿ & ಜಾಗೃತ) ಪ್ರಶಾಂತ್ ಕುಮಾರ್‌ ಮಿಶ್ರ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.

Related posts