ಬೆಂಗಳೂರು: ‘ಸರ್ಕಾರಿನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ. ಇದು ಉಚಿತ, ಖಚಿತ, ನಿಶ್ಚಿತ’ ಎಂಬ ಬಿಜೆಪಿಯ ಟ್ವೀಟಾಸ್ತ್ರ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ, .ಈ ಕುರಿತಂತೆ KSRTC ಕೂಡಾ ಸ್ಪಷ್ಟನೆ ನೀಡಿದೆ.
ಕೆಎಸ್ಸಾರ್ಟಿಸಿ ನೌಕರರಿಗೆ ಸಂಬಳ ನೀಡುವ ವಿಚಾರದಲ್ಲಿ ವಿಳಂಬವಾಗಿಲ್ಲ ಎನ್ನುವ ಮೂಲಕ ತಮ್ಮ ನಿಗಮದ ಸಿಬ್ಬಂದಿಗೆ ವೇತನ ವಿಚಾರದಲ್ಲಿ ಅನ್ಯಾಯವಾಗಿಲ್ಲ ಎಂದು ಸ್ಷಷ್ಟಪಡಿಸಿದೆ.
ಏನಿದು ಸಂಬಳ ಸಂಘರ್ಷ..?
ಗ್ಯಾರಂಟಿ ಜಾರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಪ್ರತಿಪಕ್ಷ ಬಿಜೆಪಿ, ಇದೀಗ ನೌಕರರ ವೇತನ ವಿಳಂಬ ವಿಚಾರವನ್ನು ಮುಂದಿಟ್ಟು ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಸರ್ಕಾರದ ಹೊಸ ಘೋಷಣೆ. ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ. ಇದು ಉಚಿತ, ಖಚಿತ, ನಿಶ್ಚಿತ’ ಎಂದು ಟೀಕಿಸಿದೆ.
BMTC ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ, KSRTC ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ, ಮೂರು ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರು ಸಂಬಳವನ್ನೇ ಕಂಡಿಲ್ಲ, ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೂ ಸಂಬಳ ಸಿಕ್ಕಿಲ್ಲ, ಸರ್ಕಾರಿ ಶಾಲಾ ಶಿಕ್ಷಕರಿಗೂ ತಿಂಗಳಾದರೂ ಖಾತೆಗೆ ಸಂಬಳ ಜಮೆ ಆಗಿಲ್ಲ, ಗುತ್ತಿಗೆ ಆಧಾರದ ಸರ್ಕಾರಿ ನೌಕರರಿಗೆ ಸಂಬಳ ತಲುಪಿಲ್ಲ ಎಂದು ಬೊಟ್ಟು ಮಾಡಿರುವ ಬಿಜೆಪಿ, ಇನ್ನೂ ಹಲವು ಇಲಾಖೆಗಳ ಸರ್ಕಾರಿ ನೌಕರರು ಸಂಬಳ ಸಿಗದೆ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದಿದೆ.
KSRTC ಸ್ಪಷ್ಟನೆ:
ಇದಕ್ಕೆ ಸ್ಪಷ್ಟನೆ ನೀಡಿರುವ KSRTC, ತನ್ನ ನಿಗಮದ ಸಮಸ್ತ ಸಿಬ್ಬಂದಿಯ ವೇತನವನ್ನು ಆಗಸ್ಟ್ 1ರಂದೇ ನೀಡಲಾಗಿದೆ ಎಂದಿದೆ. BMTC ಸಿಬ್ಬಂದಿ ವರ್ಗದ ವೇತನವನ್ನು ಆಗಸ್ಟ್ 7ರಂದು ವಿತರಿಸಲಾಗಿದೆ ಎಂದೂ ಸ್ಪಷ್ಟಪಡಿಸಿದೆ. ಈ ಕುರಿತ KSRTC ಟ್ವೀಟ್ ಕೂಡಾ ಗಮನಸೆಳೆದಿದೆ.
ಆದ್ಯ ಗಮನಕ್ಕೆ:
ಎಂದಿನಂತೆ ಕೆ ಎಸ್ ಆರ್ ಟಿ ಸಿ ಯ ಸಮಸ್ತ ಸಿಬ್ಬಂದಿಗಳ ವೇತನವನ್ನು ಆಗಸ್ಟ್ 1 ರಂದು
ಹಾಗೂ ಬಿ ಎಂ ಟಿ ಸಿ ಸಿಬ್ಬಂದಿಗಳ ವೇತನವನ್ನು ಆಗಸ್ಟ್ 7 ರಂದು ವಿತರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗುತ್ತಿದೆ.— KSRTC (@KSRTC_Journeys) August 13, 2023