ದಾವಣಗೆರೆ-KIA ನಡುವೆ ಫ್ಲೈಬಸ್ (ವೋಲ್ವೋ ಮಲ್ಟಿ ಆಕ್ಸೆಲ್) ಸೇವೆ ಪ್ರಾರಂಭ

ಬೆಂಗಳೂರು: ದಾವಣಗೆರೆ ಸುತ್ತಮುತ್ತಲ ಜನರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ದಾವಣಗೆರೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೌಕರ್ಯ ಕಲ್ಪಿಸುವುದಾಗಿ ಸಾರಿಗೆ ಸಚಿವ ರಾಮಲೀಗಾ ರೆಡ್ಡಿ ನೀಡಿರುವ ಭರವಸೆ ಈಡೇರಿದೆ.

ಹೊಸದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್ (ವೋಲ್ವೋ ಮಲ್ಟಿ ಆಕ್ಸೆಲ್) ಸೇವೆ ಪ್ರಾರಂಭವಾಗಿದ್ದು, ಈ ಬಸ್ಸುಗಳಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಚಾಲನೆ ನೀಡಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸ್ಸುಗಳಿಗೆ ಹಸಿರು ನಿಶಾನೆ ತೋರಿದ ಸಚಿವರು,ಫ್ಲೈ ಬಸ್ ಪ್ರಯಾಣಿಕರಿಗೆ ನಂದಿನಿ ಉತ್ಪನ್ನಗಳ ಸ್ಯ್ನಾಕ್ಸ್ ವಿತರಣೆ ಮಾಡಿ ನೂತನ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವರಾಗಿದ್ದ ತಮ್ಮ ಮೊದಲ ಅವಧಿಯಲ್ಲಿ ಮೊದಲ ಬಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಂದ ಮೈಸೂರಿಗೆ ನೇರ ಫ್ಲೈಬಸ್ ಸಾರಿಗೆ ವ್ಯವಸ್ಥೆಯು ಆಗಸ್ಟ್ 2013 ರಿಂದ ಪ್ರಾರಂಭಿಸಲಾಗಿತ್ತು. ನಂತರದ ದಿನಗಳಲ್ಲಿ ಮಡಿಕೇರಿ, ಕುಂದಾಪುರಕ್ಕೆ ಫ್ಲೈ ಬಸ್ ಸೇವೆಯನ್ನು ವಿಸ್ತರಿಸಲಾಯಿತು. ಇದೀಗ ದಾವಣಗೆರೆಗೂ ಈ ಸೇವೆ ಲಭ್ಯವಾಗಿದೆ ಎಂದರು.

ಸಾರ್ವಜನಿಕ ಸಾರಿಗೆಯನ್ನು ಉತ್ತೀಜಿಸುವುದು ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದು ನಮ್ಮ ಪ್ರಥಮ ಆದ್ಯತೆಯಾಗಿರಬೇಕು. ಆ ನಿಟ್ಟಿನಲ್ಲಿ ಬೆಂಗಳೂರು – ದಾವಣಗೆರೆ‌ ನಡುವೆ ನೇರ ಫ್ಲೈ ಬಸ್ ಸೇವೆ ಆರಂಭಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಹೊಸ ಹೊಸ ಸೇವೆ ಮತ್ತು‌ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಭಾರತ‌ ಸರ್ಕಾರದಿಂದ ಇತ್ತೀಚೆಗೆ ಮೈಸೂರು ನಗರದ ಧ್ವನಿ‌ಸ್ಪಂದನ ಉಪಕ್ರಮಕ್ಕೆ ಉತ್ಕೃಷ್ಟತಾ‌ ಪ್ರಶಸ್ತಿ‌ ಲಭಿಸಿದೆ. ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಫ್ಲೈ ಬಸ್ ಗಳಲ್ಲಿ ಇನ್ನು ಮುಂದೆ ಸ್ಯ್ನಾಕ್ಸ್ ಕಿಟ್ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಫ್ಲೈಬಸ್ ಸಾರಿಗೆಗಳ ವಿವರ:

ಹೊಸದಾಗಿ ಪ್ರಾರಂಭಿಸುತ್ತಿರುವ ಬೆಂಗಳೂರು- ದಾವಣಗೆರೆ ಮಾರ್ಗದ ಫ್ಳೈ ಬಸ್ ವೇಳಾಪಟ್ಟಿ:  ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ 00.45 ಹಾಗೂ 10.00 ಗಂಟೆಗೆ ಈ ಬಸ್ಸುಗಳು ಹೋರಾಡಲಿವೆ. ದಾವಣಗೆರೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 08.00 ಮತ್ತು 17.00 ಗಂಟೆಗೆ ಹೋರಾಡಲಿವೆ. ಬೆಂಗಳೂರು ವಿಮಾನ ನಿಲ್ದಾಣ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ದೊಡ್ಡಬಳ್ಳಾಪುರ ಬೈಪಾಸ್, ಡಾಬಸ್ ಪೇಟೆ, ತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್ ಮೂಲಕ ಸಂಚರಿಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರು ಬೈಪಾಸ್ ಹಾಗೂ ಚಿತ್ರದುರ್ಗ ಬೈಪಾಸ್ ಸೇರಿ ಎರಡು ಮಾರ್ಗಮಧ್ಯದ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನೀಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ತುಮಕೂರು ₹400, ಚಿತ್ರದುರ್ಗ ₹980, ದಾವಣಗೆರೆ ₹1250 ಟಿಕೆಟ್ ದರ ನಿಗದಿಪಡಿಸಲಾಗಿದೆ.

KMF ರವರಿಂದ ನಂದಿನಿ ಉತ್ಪನ್ನಗಳ ಸ್ನ್ಯಾಕ್ಸ್ ಬಾಕ್ಸ್ ಅನ್ನು ಖರೀದಿಸಿ, 15.11.2025 ರಿಂದ ಜಾರಿಗೆ ಬರುವಂತೆ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಉಚಿತವಾಗಿ ವಿತರಿಸಲಾಗುವುದು. ಕಿಟ್ ನಲ್ಲಿ ನೀರಿನ ಬಾಟಲ್, Flavoured Milk, Cookies ( Sweet & Kara) ಕೇಕ್,‌ಕೋಡುಬಳೆ ‌ಪ್ಯಾಕೆಟ್ ಇರುತ್ತದೆ. ಸದರಿ‌ ಕಿಟ್ ಅನ್ನು ಬ್ರ್ಯಾಂಡ್‌ ಮಾಡಲಾಗಿದ್ದು, ಅದರ ಹಿಂಬದಿಯಲ್ಲಿ ನಿಗಮದ‌ ಪ್ರತಿಷ್ಠಿತ ಸೇವೆಗಳು‌‌‌ ದಕ್ಷಿಣ ಭಾರತದಾದ್ಯಂತ ‌ಕಾರ್ಯಾಚರಣೆಯಾಗುವ ಸ್ಥಳಗಳ‌ ಮಾಹಿತಿ ಮತ್ತು QR Scanner Code ಟಿಕೇಟ್ ಬುಕ್‌ಮಾಡಲು ಅನುವಾಗುವಂತೆ ಮುದ್ರಿಸಲಾಗಿದೆ.

ಈ ಬಸ್ಸುಗಳ ಉದ್ಘಾಟನಾ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ‌ ಪಾಷ, ನಿರ್ದೇಶಕರು (ಸಿಬ್ಬಂದಿ & ಜಾಗೃತ) ಡಾ.ಕೆ ನಂದಿನಿ ದೇವಿ, ನಿರ್ದೇಶಕರು (ಮಾಹಿತಿ ‌ತಂತ್ರಜ್ಞಾನ) ಇಬ್ರಾಹಿಂ ಮೈಗೂರ, KIAL ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್, ಉಪಾಧ್ಯಕ್ಷ ಪ್ರವತ್, ವ್ಯವಸ್ಥಾಪಕರಾದ ಸಂಜಯ್ ಚಂದ್ರ, ಸ್ವಾತಿ ರೆಡ್ಡಿ ಸಹಿತ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

Related posts