ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮುಜರಾಯಿ ಸಚಿವರು ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಿ, ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಒದಗಿಸುವ ಹಾಗೂ ಶ್ರೀ ಕ್ಷೇತ್ರವನ್ನು ಮತ್ತಷ್ಟು ಸಾರ್ವಜನಿಕ ಸ್ನೇಹಿ ಯಾಗಿಸಲು ಮಾಸ್ಟರ್ ಪ್ಲಾನ್ ರೂಪಿಸಲು ಸಭೆ ನಡೆಸಿದ ಸಚಿವರು, ಹೊಸದಾಗಿ ಸಮಿತಿ ರಚಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 77 ರನ್ವಯ 15 ಜನ ಅಧಿಕಾರಿ/ಅಧಿಕಾರೇತರ ಸದಸ್ಯರನ್ನು ಮತ್ತು ಹೆಚ್ಚುವರಿಯಾಗಿ 3 ಜನ ಸದಸ್ಯರುಗಳನ್ನು ಒಳಗೊಂಡಂತೆ ಮೇಲ್ವಿಚಾರಣಾ ಸಮಿತಿ ರಚಸಿ ಆದೇಶಿಸಲಾಗಿದೆ.
15.02.2025 ರಂದು ನಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮಾಸ್ಟರ್ ಪ್ಲಾನ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮುಜರಾಯಿ ಇಲಾಖೆ ಆಯುಕ್ತರು ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ.
-
ದೇವಳದ ಸುತ್ತು ಗೋಪುರ (ಸುತ್ತುಪೌಳಿ) ನಿರ್ಮಾಣ: ಇದನ್ನು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯದ ಕಟ್ಟಡದ ವಿನ್ಯಾಸಕ್ಕೆ ಸರಿ ಹೊಂದುವಂತೆ, ಮರು ವಿನ್ಯಾಸ ಮಾಡಿ, ಅನುಮತಿ ಪಡೆದು ನಿರ್ಮಿಸಲು ತೀರ್ಮಾನ.
-
ಆಶ್ಲೇಷಬಲಿ, ಪೂಜಾ ಮಂದಿರ ನಿರ್ಮಾಣ: ಮಾಸ್ಟರ್ ಪ್ಲಾನ್ ಪ್ರಕಾರ ತುಳಸಿತೋಟದಲ್ಲಿ ಸ್ಥಳ ಗುರುತಿಸಿದ್ದು, ದೇವಾಲಯದ ಕಟ್ಟಡದ ವಿನ್ಯಾಸಕ್ಕೆ ಹೊಂದಾಣಿಕೆಯಾಗುವಂತೆ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದೇವಾಲಯದ ವತಿಯಿಂದ ಅಂದಾಜು ಮತ್ತು ನಕ್ಷೆ ತಯಾರಿಸಿ ಇದರಂತೆ ನಿರ್ಮಿಸಲು ದಾನಿಗಳು ಮುಂದೆ ಬಂದಲ್ಲಿ ಅವರಿಗೆ ಅನುಮತಿ ನೀಡಲು, ಇಲ್ಲವಾದಲ್ಲಿ ದೇವಾಲಯದ ವತಿಯಿಂದ ನಿರ್ಮಿಸಲು ತೀರ್ಮಾನ.
-
ಅನ್ನದಾಸೋಹ, ಹಾಲಿ ಇರುವ ದಾಸೋಹ: ಹಾಲಿ ಇರುವ ದಾಸೋಹ ಉಳಿಸಿಕೊಳ್ಳಲು ಸಾಧ್ಯವಿದ್ದರೆ ಉಳಿಸಿಕೊಂಡು ವಿಸ್ತರಿಸಲು ಅಥವಾ ಹೊಸದಾಗಿ ದೊಡ್ಡದಾದ ದಾಸೋಹ ಭವನ ನಿರ್ಮಿಸಲು ಅಗತ್ಯ ಅಂದಾಜು ನಕ್ಷೆ ಸಲ್ಲಿಸಲು ತೀರ್ಮಾನ.
-
ರಥ ಬೀದಿ: ಉತ್ತಮ ವಿನ್ಯಾಸದಲ್ಲಿ ಸ್ಥಳೀಯ ಸಂಸ್ಕೃತಿ ಬಿಂಬಿಸುವ ದೇವಾಲಯದ ವಿನ್ಯಾಸಕ್ಕೆ ಸರಿ ಹೊಂದುವಂತೆ ಒಂದು ಉತ್ತಮವಾದ ರಥದ ಬೀದಿಯಲ್ಲಿ ಭಕ್ತರು ಕೂರಲು ಉತ್ತಮ ವ್ಯವಸ್ಥೆ ನಿರ್ಮಿಸಲು ತೀರ್ಮಾನ.
-
ಕೊಠಡಿಗಳ ನಿರ್ಮಾಣ: ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ತಲಾ 200 ಕೊಠಡಿಗಳ 4 ಬ್ಲಾಕ್‌ನಲ್ಲಿ ಒಟ್ಟು ತೀರ್ಮಾನಿಸಲಾಯಿತು. 800 ಕೊಠಡಿಗಳ 4 ಸಂಕೀರ್ಣ ನಿರ್ಮಿಸಲು ತೀರ್ಮಾನ.
-
ಶೌಚಾಲಯ ಮತ್ತು ಸ್ನಾನ ಗೃಹಗಳು: ಶೌಚಾಲಯ ಮತ್ತು ಸ್ನಾನಗೃಹಗಳ ಒಟ್ಟು 4 ಬ್ಲಾಕ್‌ಗಳಲ್ಲಿ ತಲಾ 24 ಶೌಚಾಲಯ ಹಾಗೂ 16 ಸ್ನಾನಗೃಹಗಳನ್ನು ನಿರ್ಮಿಸಲು ತೀರ್ಮಾನ.
-
ವಾಣಿಜ್ಯ ಸಂಕೀರ್ಣ: ದೇವಾಲಯಕ್ಕೆ ಬರುವ ದಾರಿಯಲ್ಲಿ ಸೂಕ್ತ ಸ್ಥಳದಲ್ಲಿ, ರಸ್ತೆ ಬದಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ತೀರ್ಮಾನ.
-
ಪಾರ್ಕಿಂಗ್ ನಿರ್ಮಾಣ: ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಲು ಅಗತ್ಯವಿರುವ ಜಮೀನು ಖರೀದಿಸಲು ಕ್ರಮ.
-
ಡಾರ್ಮೆಟರಿ ನಿರ್ಮಾಣ: 50 ಕೊಠಡಿ ಹೊಂದಿರುವ ಡಾರ್ಮೆಟರಿಗಳನ್ನು ನಿರ್ಮಿಸಲು ತೀರ್ಮಾನ.
-
ಕ್ಯೂ ಲೈನ್ ನಿರ್ಮಾಣ: ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕ್ಯೂ-ಲೈನ್ ಕಾಂಪ್ಲೆಕ್ಸ್ ಆಧುನಿಕ ವಾಗಿರುವಂತೆ ನಿರ್ಮಿಸಲು ತೀರ್ಮಾನ.