ಲಯನ್ಸ್ ಕ್ಲಬ್ ಸಂಚಾರಿ ರಕ್ತ ಸಂಗ್ರಹಣೆ ಬಸ್ಸು; ಮುಖ್ಯಮಂತ್ರಿ ಚಾಲನೆ

ಬೆಂಗಳೂರು; ರಕ್ತದಾನ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಲು ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.

ಲಯನ್ಸ್ ಕ್ಲಬ್ ವತಿಯಿಂದ ಮೂರು ಸಂಚಾರಿ ರಕ್ತ ಸಂಗ್ರಹಣೆ ಹಾಗೂ ಸಾಗಾಣಿಕೆ ಬಸ್ಸುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವರು, ರಕ್ತದಾನ ಮಹಾದಾನವೆಂದು ಪರಿಗಣಿಸಲ್ಪಟ್ಟಿದೆ. ಕೋವಿಡ್ ಬಂದ ಬಳಿಕ ಕಳೆದೊಂದು ವರ್ಷದಿಂದ ರಕ್ತಸಂಗ್ರಹ ಪ್ರಮಾಣ ಬಹಳ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಘ, ಸಂಸ್ಥೆಗಳು ಮುಂದೆ ಬಂದು ಸರ್ಕಾರದೊಂದಿಗೆ ಕೈ ಜೋಡಿಸಿ ರಕ್ತಸಂಗ್ರಹದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ವರ್ಷ 4 ಕೋಟಿ ಯುನಿಟ್ ನಷ್ಟು ರಕ್ತದ ಬೇಡಿಕೆ ಇದೆ. ಶೇ.1 ರಷ್ಟು ಜನರು ರಕ್ತ ನೀಡಿದರೂ ಈ ಅವಶ್ಯಕತೆಯನ್ನು ನೀಗಿಸಬಹುದು. ಇದಕ್ಕಾಗಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಮುಖ್ಯಮಂತ್ರಿಗಳು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು.

ಕೋವಿಡ್ ಎರಡನೇ ಅಲೆಯ ಹೊಸ್ತಿಲಲ್ಲಿ ನಾವಿದ್ದು, ಜನರು ಹೆಚ್ಚು ಎಚ್ಚರ ವಹಿಸಬೇಕು. ಈ ಸಂದರ್ಭ ರಕ್ತದಾನ ಹೆಚ್ಚು ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ ಎಂದರು.

Related posts