ಬೆಂಗಳೂರು:ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನನ್ನು ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ. ಅವರ ಕಚೇರಿ ಹಾಗೂ ಮನೆಯಲ್ಲಿ ದಾಳಿ ಮಾಡಿ ಹಣ ಜಪ್ತಿ ಮಾಡಿದ್ದು, ಶಾಸಕರ ರಕ್ಷಣೆಗೆ ಸಿಎಂ, ಗೃಹ ಸಚಿವರು, ಸಚಿವ ನಿರಾಣಿ ಅವರು ರಕ್ಷಣೆಗೆ ಬಹಳ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರೂ ಆದ ರಮೇಶ್ ಬಾಬು, ನಿನ್ನೆ ವಿರೂಪಾಕ್ಷಪ್ಪ ಅವರ ಮಗನ ಬಳಿ ಸಿಕ್ಕಿದ್ದು 40 ಲಕ್ಷ, ನಂತರ ಅದು 7.50 ಕೋಟಿಗೆ ಹೋಗಿದೆ. ಈ ಸರ್ಕಾರಕ್ಕೂ 40% ಗೆ ಬಹಳ ಅವಿನಾಭಾವ ಸಂಬಂಧವಿದೆ. ಬಿಜೆಪಿ ಸಚಿವರು ಶಾಸಕರು, ಸಿಎಂಗೆ ಬಹಳ ಉತ್ತಮ ಸಂಬಂಧವಿದೆ ಎಂದರು.
ನಿನ್ನೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಶಾಸಕರ ಮಗನನ್ನು ಬಂಧಿಸಿದ್ದಾರೆ. ಅವರ ಕಚೇರಿ ಹಾಗೂ ಮನೆಯಲ್ಲಿ ದಾಳಿ ಮಾಡಿ ಹಣ ಜಪ್ತಿ ಮಾಡಿದ್ದು, ಶಾಸಕರ ರಕ್ಷಣೆಗೆ ಸಿಎಂ, ಗೃಹ ಸಚಿವರು, ಸಚಿವ ನಿರಾಣಿ ಅವರು ರಕ್ಷಣೆಗೆ ಬಹಳ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ರಮೇಶ್ ಬಾಬು ಆರೋಪಿಸಿದರು.
ಸೋಪ್ ಮತ್ತು ಡಿಟರ್ಜೆಂಡ್ ಕಾರ್ಪೋರೇಷನ್ ಬೃಹತ್ ಕೈಗಾರಿಕಾ ಸಚಿವಾಲಯ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಶಾಸಕರು ಪ್ರಮುಖ ಆರೋಪಿಯಾಗಿದ್ದು, ಇವರು ಪುತ್ರನ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ. ಈ ಅಕ್ರಮ ಹಣ ಶಾಸಕರ ಮನೆಯಲ್ಲಿ ಸಿಕ್ಕಿದೆ. ಹೀಗಾಗಿ ಈ ಪ್ರಕರಣದಲ್ಲಿ ಶಾಸಕರು ಎ1 ಆಗಿದ್ದು, ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಶಾಸಕರನ್ನು ಎ1 ಆಗಿ ಮಾಡಬೇಕು ಎಂದು ಕಾಂಗ್ರೆಸ್ ಮನವಿ ಮಾಡುತ್ತಿದೆ ಎಂದವರು ಹೇಳಿದರು.
ಎಸಿಬಿ ಪರ ಬ್ಯಾಟಿಂಗ್ ಮಾಡಿದ್ದ ಬೊಮ್ಮಾಯಿ ಸರ್ಕಾರ..
ಲೋಕಾಯುಕ್ತ ಸಂಸ್ಥೆ ಮುಚ್ಚಿಹಾಕಿದ್ದು ಕಾಂಗ್ರೆಸ್ ಎಂಬ ಸಿಎಂ ಮಾತಿನ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ‘ಅಧಿಕಾರಿಗಳಿಂದ ಮುಖ್ಯಮಂತ್ರಿಗಳಿಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ ಅಥವಾ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಡ್ವಕೇಟ್ ಜನರಲ್ ಎಸಿಬಿ ಪರವಾಗಿ ವಾದ ಮಾಡಿದ್ದು ಮರೆತಿದ್ದಾರಾ? ಅವರು ತಮ್ಮ ವಾದದಲ್ಲಿ ಎಸಿಬಿ ಉತ್ತಮ ಸಂಸ್ಥೆ ಇದರ ಆರಂಭದಿಂದ ಲೋಕಾಯುಕ್ತ ಸಂಸ್ಥೆಗೆ ತೊಂದರೆ ಆಗಿಲ್ಲ, ಬಹಳ ರಾಜ್ಯಗಳಲ್ಲಿ ಈ ಎರಡು ಸಂ,ಸ್ಥೆಗಳು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೂ ಈ ರೀತಿ ಎರಡು ನಾಲಿಗೆ ಯಾಕೆ? ಯಾವುದೇ ಏಜೆಂನ್ಸಿ ದಾಳಿ ಮಾಡಿದರೂ ಸಿಕ್ಕಿಬೀಳುತ್ತಿರುವುದು ಕೇವಲ ಬಿಜೆಪಿಗರು ಮಾತ್ರವೇ? ಕಾಂಗ್ರೆಸ್ ನಾಯಕರು ಸಿಕ್ಕಿಬೀಳುತ್ತಾರೆ ಎನ್ನುವುದಾದರೆ ಎಲ್ಲ ಪ್ರಕರಣ ನ್ಯಾಯಾಂಗ ತನಿಖೆ ನೀಡಿ. ಕಾಂಗ್ರೆಸ್ ನಾಯಕರ ರಕ್ಷಣೆ ಯಾಕೆ ಮಾಡುತ್ತಿದ್ದಾರೆ? ನಾವು ವಿರೋಧ ಪಕ್ಷವಾಗಿ ನಮ್ಮ ಗಮನಕ್ಕೆ ಬಂದ ವಿಚಾರ ಪ್ರಸ್ತಾಪಿಸಿದ್ದೇವೆ. ಇವರು ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡುತ್ತಿದ್ದರೂ. ಇವರು ಹೇಳಿದ ಪ್ರಕರಣವನ್ನು ಸಿಬಿಐಗೆ ನೀಡಿದ್ದೇವೆ. ನಾವು ಅನೇಕ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದೇವೆ’ ಎಂದರು.
ಶಾಸಕರ ಮನೆಯಲ್ಲಿ ಸಿಕ್ಕ ಹಣ ಯಾರದು ಎಂಬ ದಾಖಲೆ ಕೇಳಿದ ಕಾನೂನು ಸಚಿವರ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ‘ಹಣ ಸಿಕ್ಕ ಮೇಲೂ ಇವರು ದಾಖಲೆ ನೀಡುತ್ತಿದ್ದಾರಾ? ಲೋಕಾಯುಕ್ತ ದಾಳಿ ಬಗ್ಗೆ ಕಾನೂನು ಸಚಿವರು ದಾಖಲೆ ಕೇಳುತ್ತಿದ್ದಾರೆಯೇ? ಈ ಹಣ ಬಿಜೆಪಿ ಶಾಸಕರ ಮನೆಯಲ್ಲಿ ಸಿಕ್ಕ ನಂತರ ಈ ಹಣ ಯಾರದು ಎಂಬ ದಾಖಲೆ ಎಲ್ಲಿಂದ ನೀಡಬೇಕು? ಕಾನೂನು ಸಚಿವರು ನಮಗಿಂತ ಪ್ರಬುದ್ಧರು ಅವರನ್ನೇ ಈ ಬಗ್ಗೆ ಕೇಳಬೇಕು’ ಎಂದು ಟೀಕಿಸಿದರು.