ಮೋದಿ ‘ಗುಜರಾತಿನ ಭೂಮಿಪುತ್ರ’ ಎಂದಾದರೆ ನಾನು ‘ಕರ್ನಾಟಕದ ಮಣ್ಣಿನ ಮಗ’

ರಾಯಚೂರು: ಪ್ರಧಾನಿ ಮೋದಿ ‘ಗುಜರಾತಿನ ಭೂಮಿಪುತ್ರ’ ಎಂದಾದರೆ ನಾನು ‘ಕರ್ನಾಟಕದ ಮಣ್ಣಿನ ಮಗ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೊಂಡಿದ್ದಾರೆ.

ರಾಯಚೂರು ಜಿಲ್ಲೆ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟ್ಟಪ್ಪ ನಾಯಕ್‌ ಪರ ಪ್ರಚಾರ ಕೈಗೊಂಡ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ನಾನು ಗುಜರಾತ್ತಿನ ಭೂಮಿಪುತ್ರ ಅಂತ ಹೇಳಿದ್ರು, ಇಂದು ನಾನು ಹೇಳ್ತೇನೆ ನಾನು ಕರ್ನಾಟಕದ ಮಣ್ಣಿನ ಮಗ, ಇದು ನನ್ನ ಜನ್ನಭೂಮಿ. ಇಂದು ನಾನು ಮೋದಿಯವರಿಗೆ ಕೇಳ್ತಾ ಇದ್ದೀನಿ, ಇದು ನನ್ನ ಜಿಲ್ಲೆ ಎಂದು ನಿಮಗೆ ಹೇಳಕ್ಕೆ ಬಯಸುತ್ತೇನೆ. ಈ ಭಾಗದಿಂದ 50 ವರ್ಷದಿಂದ ನಾನು ಜನರಿಂದ ಆರಿಸಿ ಬರುತ್ತಾ ಇದ್ದೀನಿ ಎಂದರು.

ಇಂದು ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಸೋನಿಯಾ ಗಾಂಧಿ ಅವರು ಮತ್ತು ಕಾಂಗ್ರೆಸ್‌ ಪಕ್ಷದ ಉನ್ನತ ಮತ್ತು ಹಿರಿಯ ನಾಯಕರು ಸೇರಿ ಇಂದು ನನ್ನನ್ನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿ ಮಾಡಿದ್ದಾರೆ. ಈ ಎಐಸಿಸಿ ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಕ್ಕಿಲ್ಲ. ಈ ಸ್ಥಾನದಲ್ಲಿ ಗಾಂಧೀ, ನೆಹರೂ, ಪಟೇಲ್‌ ಹಾಗೂ ಮೌಲಾನ ಆಝಾಧ್‌ ಈ ಸ್ಥಾನವನ್ನು ಅಲಂಕರಿಸಿದ್ದರು. ಆ ಸ್ಥಾನ ಇಂದು ನಿಮ್ಮೆಲ್ಲರ ಆಶೀವಾರ್ದದಿಂದ ಇಂದು ಈ ಸ್ಥಾನದಲ್ಲಿ ಇದ್ದೇನೆ. ಹಾಗಾಗಿ ನೀವು ಅದರ ಮಾರ್ಯದೆಯನ್ನು ಉಳಿಸಬೇಕು. ಹಾಗಾಗಿ ರಾಜಾ ವೆಂಕಟ್ಟಪ್ಪ ನಾಯಕ್‌ ಅವರನ್ನು ಗೆಲ್ಲಿಸಿ, ನಾನು ನಿಮ್ಮ ಮಣ್ಣಿನ ಮಗ. ಈಗ ನನಗೂ ಹಕ್ಕಿದೆ. ನಮಗೂ ಸ್ವಾಭಿಮಾನವಿದೆ. ಅದಕ್ಕಾಗಿ ನಿಮ್ಮಲ್ಲಿ ಸ್ವಾಭಿಮಾನವಿದ್ದಲ್ಲಿ, ಹೇಗೆ ಮೋದಿಯವರನ್ನು ಗುಜರಾತ್‌ ಜನತೆ ಗೆಲ್ಲಿಸಿ ತಂದಿದ್ದಾರೋ ಅದೇರೀತಿ ಇಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತಂದು ನನಗೆ ನೀವು ಮಾರ್ಯದೆ ಕೊಡಬೇಕು ಎಂದರು.

ಈ ಭಾಗದ ಏಳು ಜಿಲ್ಲೆಯ ಜನಗಳಿಗೆ, ಸಂವಿಧಾನಕ್ಕೆ ತಿದ್ದುಪಡಿ ತಂದು ಹಲವು ದಶಕಗಳ ಹೋರಾಟದ ಫಲವಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ನೀಡಿದ 371 (ಜೆ) ಮೀಸಲಾತಿ ಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರು ಹಲವು ಉನ್ನತ ಹುದ್ದೆ ಹಿಡಿಯಲು ಸಹಕಾರಿಯಾಗಿದೆ. ಅದಕ್ಕೆ ನಾನು ಕಾರಣ. ನನ್ನ ಪರಿಶ್ರಮದಿಂದ 371 (ಜೆ) ಜಾರಿಯಾಯಿತು ಎಂದ ಅವರು, ಇದು ಈ ಭಾಗದ 7 ಜಿಲ್ಲೆಗಳ ಜನರ ಶಿಕ್ಷಣ, ಉದ್ಯೋಗಕ್ಕೆ ಸಹಕಾರಿಯಾಗಿದೆ. ಇದರಿಂದ ಹಲವರು ಪಿಎಸ್‌ಐ, ಎಸಿ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಎಲ್ಲರಿಗೂ ಸರಿಸಮಾನವಾಗಿ ಅನೇಕ ಯೋಜನೆಗಳನ್ನು ಕೊಟ್ಟಿದ್ದೇವೆ. ಅನೇಕ ಭಾಗ್ಯಗಳನ್ನು ಕೊಟ್ಟು ಜನರ ಕಲ್ಯಾಣವನ್ನು ಮಾಡಿದ್ದಾರೆ. ಈ ಬಿಜೆಪಿ ಸರ್ಕಾರ ಮಾತ್ರ ಕಲ್ಯಾಣ ಕರ್ನಾಟಕ ಸರ್ಕಾರದ ಹೆಸರು ಬದಲಾವಣೆ ಮಾಡಿದೇ ಹೊರತು ಯಾವುದೇ ಜನರ ಕಲ್ಯಾಣ ಈ ಸರ್ಕಾರ ಮಾಡಿಲ್ಲ ಎಂದರು.

ಅಮಿತಾ ಶಾ ಪ್ರಚಾರಕ್ಕೆ ಬಂದಿದ್ದಾರೆ ಏನು ಕೊಡುಗೆ ಕೊಟ್ಟಿದ್ದಾರೆ ಈ ರಾಜ್ಯಕ್ಕೆ? ಯಾವುದೇ ಹೊಸ ಉದ್ಯಮದ ಸ್ಥಾಪನೆಯಾಗಿಲ್ಲ, ಜನರಿಗೆ ಉದ್ಯೋಗ ಕೊಟ್ಟಿಲ್ಲ ಏನು ಈ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ ಎಂದ ಖರ್ಗೆ, 250000 ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಿಲ್ಲ. ಎಸ್ಸಿ. ಎಸ್ಟಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಕೊಟ್ಟಿಲ್ಲ ಅವರ ಶ್ರೇಯೋಭಿವೃದ್ಧಿ ಇವರಿಗೆ ಬೇಕಾಗಿಲ್ಲ. ಜನರ ಕಷ್ಟಗಳನ್ನು ಆಲಿಸುವಲ್ಲಿ ಈ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ‌ ಎಂದರು.

Related posts