(ವರದಿ: ಸೋಮಶೇಖರ್ ಶಾಂತಿಪುರ)
ಬೆಂಗಳೂರು: ಕೊರೋನಾ ಕಾರಣದಿಂದಾಗಿ ದೇಶವ್ಯಾಪಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಲಾಕ್’ಡೌನ್ ಜಾರಿಯಾದ ನಂತರ, ಮಾರ್ಚ್ ತಿಂಗಳ ಬಳಿಕ ಅನೇಕ ಕಂಪೆನಿಗಳು ಆರ್ಥಿಕ ಸುಳಿಯಲ್ಲಿದ್ದರೆ ಲಕ್ಷಾಂತರ ಜನರು ಕೆಲಸವಿಲ್ಲದೇ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. ಆದರೆ ಶಾಂತಿಪುರದ ಜಾನಕಿರಾಮನ್ ಹಾಗೂ ರಾಮಲಿಂಗಂ ಎಂಬ ಯುವಕರಿಬ್ಬರು ಪರಿಸ್ಥಿತಿಯ ಹೊಡೆತವನ್ನೂ ಮೆಟ್ಟಿ ನಿಂತು ಸಂಕಷ್ಟವನ್ನೇ ಗೆದ್ದಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಮಂದಿಯ ಬದುಕಿಗೂ ಬೆಳಕಾಗಿದ್ದಾರೆ.
ಹಣ್ಣಿನ ವ್ಯಾಪಾರ ಮಾಡುತ್ತಿರುವ ತಮಿಳುನಾಡು ಮೂಲದ ಕನ್ನಡಿಗರಾದ ಇವರು ಲಾಕ್’ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲ ಎಂದು ಬಂದವರಿಗೆ ಕೆಲಸ ಕೊಟ್ಟಿದ್ದಾರೆ. ನೂರಾರು ಮಂದಿಗೆ ಉದ್ಯಮ ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ. ತಾನು ನಡೆಸುತ್ತಿರುವ ಹಣ್ಣುಗಳ ವ್ಯಾಪಾರವನ್ನು ಯುವ ಜನರ ಜೊತೆ ಹಂಚಿಕೊಂಡು ಸಾಕಷ್ಟು ಮಂದಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಿದ್ದಾರೆ.
ತಮಿಳುನಾಡು ಮೂಲದವರಾಗಿದ್ದರೂ ಜಾನಕಿರಾಮನ್ ತನ್ನ ಅಣ್ಣ ರಾಮಲಿಂಗ ಅವರೊಂದಿದೆ ಸೇರಿಕೊಂಡು ಬೆಂಗಳೂರು ಹೊರವಲಯದ ಉಸ್ಕೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಪ್ರಸ್ತುತ ಶಾಂತಿಪುರ ಗ್ರಾಮದಲ್ಲಿ ವಾಸವಿರುವ ಇವರು ಕೋಲಾರ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ತರಿಸಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಹಂಚುತ್ತಾರೆ.
ಬೆಳೆಗಾರರಿಗೂ ಅನುಕೂಲವಾಗಬೇಕು, ತನ್ನ ನಡೆಯನ್ನು ಅನುಸರಿಸಿ ಸಣ್ಣಪುಟ್ಟ ಸ್ವಾವಲಂಬಿಯಾಗಿ ವ್ಯಾಪಾರ ಮಾಡುತ್ತಿರುವ ಯುವಕರಿಗೂ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಮಾವಿನ ಹಣ್ಣುಗಳನ್ನು ಹಂಚುತ್ತಾರೆ. ಈ ವರ್ಷ ಕೊರೋನಾ ಕಾರಣದಿಂದಾಗಿ ಬಹುತೇಕ ಉದ್ಯಮಗಳು ನಷ್ಟಕ್ಕೊಳಗಾಗಿದ್ದರೂ ತಮ್ಮ ಕಾಯಕಕ್ಕೆ ತೊಂದರೆಯಾಗಿಲ್ಲ ಎನ್ನುತ್ತಿದ್ದಾರೆ ಜಾನಕಿರಾಮನ್.
ಮಾವು ಇಲ್ಲದ ಸೀಸನ್’ನಲ್ಲಿ ಕಲ್ಲಂಗಡಿ, ಕರ್ಬುಜ, ಆಪಲ್ ಸಹಿತ ಇತರ ಹಣ್ಣುಗಳ ವ್ಯಾಪಾರದತ್ತ ಇವರು ಚಿತ್ತ ಹರಿಸುತ್ತಾರಂತೆ.