ಮಂಡ್ಯ: ನಾಡಿನ ಪ್ರಸಿದ್ಧ ದೇವಾಲಯಗಲ್ಲೊಂದಾದ ಮೇಲುಕೋಟೆ ಚೆಲುವನಾರಾಯಣ ದೇವಾಲಯದಲ್ಲಿ ಕೃಷ್ಣರಾಜಮುಡಿ ಉತ್ಸವ ನೆರವೇರಿತು. ಭಾನುವಾರದ ಲಾಕ್’ಡೌನ್ ಪರಿಸ್ಥಿತಿ ನಡುವೆಯೂ ದೇವಾಲಯದಲ್ಲಿ ಭಕ್ತಿ ಕೈಂಕರ್ಯ ಮೇಳೈಸಿತು.
ಮೈಸೂರಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ಕೃಷ್ಣರಾಜ ಒಡೆಯರ್ ರವರಿಂದ ಪ್ರಾರಂಭವಾದ ಜಾತ್ರೆ ಇದಾಗಿದೆ. ಅಷಾಢ ಮಾಸದಲ್ಲಿ ನಡೆಯುವ ಚಿಕ್ಕಜಾತ್ರೆ ಎಂದೇ ಕೃಷ್ಣ ರಾಜಮುಡಿ ಉತ್ಸವವನ್ನು ಬಣ್ಣಿಸಲಾಗುತ್ತದೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಜನ್ಮದಿನದಂದು ಶ್ರೀನಾರಾಯಣಸ್ವಾಮಿ ಮತ್ತು ಚಲುವರಾಯಸ್ವಾಮಿ ಅಮ್ಮನವರು ಸೇರಿದಂತೆ ಕ್ಷೇತ್ರದಲ್ಲಿರುವ ಎಲ್ಲಾ ದೇವತಾ ಮೂರ್ತಿಗಳಿಗೂ ಮಹಾಭಿಷೇಕ ನಡೆದು ಈ ಉತ್ಸವವನ್ನು ಆಚರಿಸಲಾಗುತ್ತದೆ. ಇದು ವೈರಮುಡಿ ಜಾತ್ರೆಯಂತೆಯೇ ಆಕರ್ಷಣೆಯ ಕೇಂದ್ರಬಿಂದು. ಕೃಷ್ಣರಾಜ ಒಡೆಯರು ಮಾಡಿಸಿ ಸಮರ್ಪಣೆ ಮಾಡಿದ ಕೃಷ್ಣ ರಾಜಮುಡಿಯನ್ನು ದೇವರ ವಿಗ್ರಹಕ್ಕೆ ಧಾರಣೆ ಮಾಡಿ ಈ ಉತ್ಸವ ಆಚರಿಸುವುದು ಈ ಕ್ಷೇತ್ರದ್ದೇ ಆದ ವಿಶೇಷ.
ಭಾನುವಾರದ ಈ ಕೃಷ್ಣ ರಾಜಮುಡಿ ಉತ್ಸವವದಲ್ಲಿ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶ ಇರಲಿಲ್ಲ. ದೇವಾಲಯದ ಸಿಬ್ಬಂದಿ ಹಾಗೂ ಅರ್ಚಕ ವೃಂದ ಈ ಕೈಂಕರ್ಯವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು.