ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚಾಂಗ್ ಚಂಡಮಾರುತದಿಂದಾಗಿ ಆಂಧಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೆಲ್ಲೂರು ಮತ್ತು ಮಚಲಿಪಟ್ನಂ, ಬಾಪಟ್ಲಾ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಿಚಾಂಗ್ ಚಂಡಮಾರುತದಿಂದಾಗಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಂದ್ರಪ್ರದೇಶದ ಹಲವು ಜೆಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಆಂಧ್ರ ಪ್ರದೇಶದ ಹಲವೆಡೆ ರೆಡ್ ಅಲರ್ಟ್..
ಮೈಚಾಂಗ್ ಚಂಡಮಾರುತ ಹಿನ್ನೆಲೆಯಲ್ಲಿ, ಪಶ್ಚಿಮ ಗೋದಾವರಿ ಮತ್ತು ಉತ್ತರ ಕರಾವಳಿ ಆಂಧ್ರ ಪ್ರದೇಶದ ಡಾ ಅಂಬೇಡ್ಕರ್ ಕೋನಸೀಮಾ, ನೆಲ್ಲೂರು, ಪ್ರಕಾಶಂ, ಕೃಷ್ಣ, ಬಾಪಟ್ಲಾ, ಗುಂಟೂರು ಮತ್ತು ರಾಯಲಸೀಮಾ ಪ್ರದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದ ತೀವ್ರತೆಯ ಆಧಾರದ ಮೇಲೆ ರಜೆ ಘೋಷಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತಗಳು ಡಿಸೆಂಬರ್ 4 ಮತ್ತು 5 ರಂದು ರಜೆ ಘೋಷಿಸಿವೆ.
ಈ ನಡುವೆ ಆಂಧ್ರ ಪ್ರದೇಶ ಸಿಎಂ ಜೊತೆ ಮಾತನಾಡಿರುವ ಪ್ರಧಾನಿ ಮೋದಿ, ಚಂಡಮಾರುತ ನಿಭಾಯಿಸಲು ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.