ರಿಯಾದ್ (ಸೌದಿ ): ಮಧ್ಯಪ್ರಾಚ್ಯ ಬಿಕ್ಕಟ್ಟು ಇದೀಗ ವಿಶ್ವದ ಹಲವು ರಾಷ್ಟ್ರಗಳನ್ನು ಕೆರಳುವಂತೆ ಮಾಡಿದೆ. ಪ್ಯಾಲೆಸ್ತೀನ್ ದಾಳಿಗೆ ಪ್ರತೀಕಾರ ತೀರಿಸುತ್ತಿರುವ ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಮುಗಿಬಿದ್ದಿವೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಸಮರ ತೀವ್ರಗೊಂಡಿದ್ದು ಭೀಕರ ನರಮೇಧಕ್ಕೆ ಸಾಕ್ಷಿಯಾಗುತ್ತಿದೆ. ಈ ಯುದ್ಧದಲ್ಲಿ ಇಸ್ರೇಲ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅಚ್ಚರಿಯ ಸಂದೇಶ ನೀಡಿದ್ದಾರೆ.
ಸೌದಿ ರಾಜಧಾನಿ ರಿಯಾದ್‌ನಲ್ಲಿ ಶನಿವಾರ ನಡೆದ ಅರಬ್ ಮತ್ತು ಮುಸ್ಲಿಂ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ರೈಸಿ, ಇಸ್ರೇಲ್ ಸೇನೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವಂತೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಕರೆ ನೀಡಿದ್ದು, ಇಸ್ರೇಲ್‌ನೊಂದಿಗೆ ಸಂಬಂಧವನ್ನು ಇಸ್ಲಾಮಿಕ್ ದೇಶಗಳು ಮುರಿಯಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡಿ ಪ್ಯಾಲೆಸ್ಟೀನನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.