ಹೊಸ ವರ್ಷಕ್ಕೆ ಮಹಿಳೆಯರಿಗೆ ಸರ್ಕಾರದ ಕೊಡುಗೆ; ಆಯುಷ್ಮತಿ ಕ್ಲಿನಿಕ್‌ಗಳು.. ಜನವರಿಯಿಂದ ಮನೆ ಬಾಗಿಲಿಗೆ ಔಷಧಿ ಪೂರೈಕೆ

ಹುಬ್ಬಳ್ಳಿ: ಹೊಸ ವರ್ಷದ ಜನವರಿ ಅಂತ್ಯಕ್ಕೆ ಎಲ್ಲಾ 438 ʼನಮ್ಮ ಕ್ಲಿನಿಕ್‌ʼಗಳು ಕಾರ್ಯಾರಂಭವಾಗಲಿವೆ. ಹಾಗೆಯೇ ಮಹಿಳೆಯರಿಗೆ ಮೀಸಲಾದ ʼಆಯುಷ್ಮತಿʼ ಕ್ಲಿನಿಕ್‌ಗಳನ್ನೂ ಜನವರಿಯಲ್ಲೇ ಉದ್ಘಾಟಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮೊದಲ ʼನಮ್ಮ ಕ್ಲಿನಿಕ್‌ʼಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುಧಾಕರ್, ನಮ್ಮ ಕ್ಲಿನಿಕ್‌ನಲ್ಲಿ ಲ್ಯಾಬ್‌ ಪರೀಕ್ಷೆ, ತಪಾಸಣೆ, ಔಷಧಿ ಸಂಪೂರ್ಣ ಉಚಿತವಾಗಿದ್ದು, ಇದು ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರುವ ಹೆಜ್ಜೆಯಾಗಿದೆ. ಸದ್ಯ 114 ಕ್ಲಿನಿಕ್‌ಗಳನ್ನು ಉದ್ಘಾಟಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ವಾರಕ್ಕೆ 100 ರಂತೆ ಕ್ಲಿನಿಕ್‌ಗಳನ್ನು ಉದ್ಘಾಟನೆ ಮಾಡಿ, ಜನವರಿ ಅಂತ್ಯಕ್ಕೆ ಎಲ್ಲಾ 438 ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು. ಹಾಗೆಯೇ, ಆಯುಷ್ಮತಿ ಕ್ಲಿನಿಕ್‌ ಕೂಡ ಆರಂಭವಾಗಲಿದೆ. ಇದು *ಮಹಿಳೆಯರಿಗೆ ನಮ್ಮ ಸರ್ಕಾರ ನೀಡುತ್ತಿರುವ ಹೊಸ ವರ್ಷದ ಕೊಡುಗೆ* ಎಂದು ತಿಳಿಸಿದರು.

ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದ್ದು, ಇಲ್ಲಿ 30 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರೂ ವರ್ಷಕ್ಕೆ ಒಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಭಾರತ ಈಗ ಮಧುಮೇಹದ ಕೇಂದ್ರವಾಗಿದ್ದು, ಇಂತಹ ಅಸಾಂಕ್ರಾಮಿಕ ರೋಗಗಳ ಪತ್ತೆ ಅಗತ್ಯವಿದೆ. ಇದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಈ ಕೇಂದ್ರಗಳಲ್ಲಿ ಶೇ.60 ರಷ್ಟು ಜನರನ್ನು ತಪಾಸಣೆ ಮಾಡಿದ್ದು, ವಿವಿಧ ರೋಗಗಳಿಗೆ ಉಚಿತ ಔಷಧಿ ನೀಡಲಾಗುತ್ತಿದೆ. *ಜನವರಿ ತಿಂಗಳಿಂದ ಮಧುಮೇಹ, ಬಿಪಿ, ಕ್ಷಯ ಮೊದಲಾದ ರೋಗಗಳಿಗೆ ಔಷಧಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಮಾಡಲಾಗುವುದು* ಎಂದು ಮಾಹಿತಿ ನೀಡಿದರು.

ಇತಿಹಾಸದಲ್ಲಿ ಯಾವ ಸರ್ಕಾರವೂ ಒಂದೇ ಬಾರಿಗೆ 114 ಕ್ಲಿನಿಕ್‌ಗಳನ್ನು ಉದ್ಘಾಟನೆ ಮಾಡಿಲ್ಲ. ಇಂದು ನಮ್ಮ ಸರ್ಕಾರದ ಮೂಲಕ ಸಾರ್ವಕಾಲಿಕ ದಾಖಲೆಯಾಗಿದೆ. ಸಾಮಾನ್ಯ ಜನರ ಮುಖ್ಯಮಂತ್ರಿಯಾಗಿರುವ, ʼಕಾಮನ್‌ ಮ್ಯಾನ್‌ʼ ಬಸವರಾಜ ಬೊಮ್ಮಾಯಿ ಅವರಿಂದ ʼನಮ್ಮ ಕ್ಲಿನಿಕ್‌ʼಗಳು ಉದ್ಘಾಟನೆಯಾಗಿವೆ ಎಂದರು.

ನಗರಗಳೆಂದರೆ ಶ್ರೀಮಂತರೇ ಇರುವ ಪ್ರದೇಶ ಎಂಬ ತಪ್ಪು ಕಲ್ಪನೆ ಇದೆ. ನಗರಗಳಲ್ಲಿರುವ ಬಡವರು, ಕೂಲಿ ಕಾರ್ಮಿಕರು, ವಲಸೆ ಬಂದವರು, ಕೊಳೆಗೇರಿ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ಇಂದು ಮೊದಲ ನಮ್ಮ ಕ್ಲಿನಿಕ್‌ನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಒಟ್ಟು 114 ಕ್ಲಿನಿಕ್‌ಗಳನ್ನು ವಿವಿಧ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.

ಒಂದು ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಲ್ಯಾಬ್‌ ತಂತ್ರಜ್ಞ, ನರ್ಸ್‌, ಡಿ ಗ್ರೂಪ್‌ ನೌಕರ ಇರುತ್ತಾರೆ. ಜ್ವರ, ಕೆಮ್ಮು, ನೆಗಡಿ ಮೊದಲಾದ ಸಣ್ಣ ಸಮಸ್ಯೆಗಳಿಗೆ ಹಿಂದೆ ಜಿಲ್ಲಾಸ್ಪತ್ರೆಗೆ ಹೋಗಬೇಕಿತ್ತು. ಆದರೆ ಈಗ ನಮ್ಮ ಕ್ಲಿನಿಕ್‌ಗೆ ಹೋಗಿ ಉಚಿತವಾಗಿ ಸೇವೆ ಪಡೆಯಬಹುದು. ಬೇರೆ ಆಸ್ಪತ್ರೆಗಳಲ್ಲಿ 10 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆದರೆ ನಮ್ಮ ಕ್ಲಿನಿಕ್‌ನಲ್ಲಿ ಬಿಡಿಗಾಸನ್ನೂ ನೀಡಬೇಕಿಲ್ಲ ಎಂದು ವಿವರಿಸಿದರು.

Related posts