ಬೆಂಗಳೂರು: ಉನ್ನತ ಶಿಕ್ಷಣ ವಿಭಾಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವತ್ತ ವೇಗದ ಹೆಜ್ಜೆಗಳನ್ನು ಇಡುತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯದ ಎಲ್ಲ ವಿಶ್ವವಿದ್ಯಾಲಯ-ಕಾಲೇಜುಗಳ ನಾಕ್ ಮಾನ್ಯತೆ, ಎನ್ಐಆರ್ಎಫ್ ರಾಂಕ್ ಪಡೆಯುವ ಸಂಬಂಧ 15 ದಿನಗಳ ಒಳಗಾಗಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಡೆಡ್ಲೈನ್ ವಿಧಿಸಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ನಡೆಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲೊಂದು ಬಹುದೊಡ್ಡ ಬದಲಾವಣೆ. ಇದಕ್ಕೆ ಅನುಗುಣವಾಗಿ ನಾವೆಲ್ಲ ಹೆಜ್ಜೆ ಇಡಬೇಕು. ಸ್ಪರ್ಧಾತ್ಮಕವಾಗಿರುವ ಈ ಸಂದರ್ಭದಲ್ಲಿ ಪ್ರತಿ ವಿವಿಯು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ (National Institutional Ranking Framework-NIRF) ರಾಂಕ್ ಹೊಂದಿರಬೇಕು ಹಾಗೂ ಪ್ರತಿ ಕಾಲೇಜ್ಗೂ ನಾಕ್ ಮಾನ್ಯತೆ (NAAC Accreditation) ಇರಲೇಬೇಕು ಎಂದು ಹೇಳಿದ್ದಾರೆ.
ಮೊದಲಿನಂತೆ ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸಾಲುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಓಡಬೇಕು. ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಏನೇನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಅದರಂತೆ ನಮ್ಮ ವಿವಿಗಳನ್ನು ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ಮರುರೂಪಿಸಬೇಕು. ಅದಕ್ಕೆ ಶಿಕ್ಷಣ ನೀತಿಯನ್ನು ಜೋಡಿಸಬೇಕು ಹಾಗೂ ಜಾಗತಿಕವಾಗಿ ಎಲ್ಲರೂ ಒಪ್ಪಿರುವ ಇಂಥ ರಾಂಕ್-ಮಾನ್ಯತೆ ಅತ್ಯಗತ್ಯ ಎಂದು ಕುಲಪತಿಗಳಿಗೆ ಉಪ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.
ಮುಂದಿನ 3 ವರ್ಷಗಳಲ್ಲಿ ಯಾವ್ಯಾವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು, ಎನ್ಐಆರ್ಎಫ್ ರಾಂಕ್, ನಾಕ್ ಮಾನ್ಯತೆ ಪಡೆಯಲು ಏನೆಲ್ಲ ಸಿದ್ಧತೆ ನಡೆಸಲಾಗುವುದು ಎಂಬ ವಿವರಗಳನ್ನು ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಿ ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದಿದ್ದಾರೆ.