ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ವಿರುದ್ದದ ಹೋರಾಟದ ವೇಳೆ ಹುತಾತ್ಮರಾದ ರಾಜ್ಯದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ನಾಡಿನ ಗಣ್ಯರು ಶ್ರದ್ದಾಂಜಲಿ ಸಮರ್ಪಿಸಿದರು.
ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಬುಧವಾರ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಕರ್ನಾಟಕ ಮೂಲ ಯೋಧ 29 ವರ್ಷದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ (Captain Pranjal) ಹುತಾತ್ಮರಾಗಿದ್ದಾರೆ. ಬೆಂಗಳೂರು ಹೊರವಲಯದ ಜಿಗಣಿ ಬಳಿ ಇಂದು ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ , ಕೆ.ಜೆ ಜಾರ್ಜ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಹಿತ ಗಣ್ಯರನೇಕರು ವೀರ ಯೋಧನ ಅಂತಿಮ ದರ್ಶನ ಪಡೆದರು. ಗೌರವ ನಮನ ಸಲ್ಲಿಸಿದ ಮುಖ್ಯಮಂತ್ರಿ ಹುತಾತ್ಮ ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಾಷ್ಟ್ರರಕ್ಷಣೆಯಲ್ಲಿ ಪ್ರಾಂಜಲ್ ಅವರ ಅನನ್ಯ ಸೇವೆ, ಸಮರ್ಪಣೆಯನ್ನು ನಾಡು ಸದಾ ಸ್ಮರಿಸಲಿದೆ ಎಂದವರು ಹೇಳಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹುತಾತ್ಮ ಯೋಧನ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಕುಟುಂಬಕ್ಕೆ ನಮ್ಮ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವೂ ಸಿಗಲಿದೆ ಎಂದು ಭರವಸೆ ನೀಡಿದರು. ಸರ್ಕಾರದಿಂದ ಈಗ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದರು.