ದೆಹಲಿ: ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಹಂತಕರ ಕೊರಳಿಗೆ ನೇಣಿನ ಕುಣಿಕೆ ಬಿದ್ದಿದ್ದು, ಈ ಮೂಲಕ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆ. ಇಂದು ಮುಂಜಾನೆ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಯಿತು.
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ 23 ವರ್ಷ ಹರೆಯದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲಿ ಅತ್ಯಾಚಾರ ನಡೆಸಿ, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಅವರಿಗೆ ಕೋರ್ಟ್ ಗುಲ್ಲು ಶಿಕ್ಷೆಯ ತೀರ್ಪು ಪ್ರಕಟಿಸಿತ್ತು. ಹೈಕೋರ್ಟ್ಜಾ, ಸುಪ್ರೀಂ ಕೋರ್ಟ್ ಕೂಡಾ ಮರಣ ದಂಡನೆಯ ತೀರ್ಪನ್ನು ಎತ್ತಿ ಹಿಡಿದಿತ್ತು. ರಾಷ್ಟ್ರಪತಿ ಕೂಡಾ ಈ ಅಪರಾಧಿಗಳ ಕ್ಷಮಾಪನಾ ಮನವಿಯನ್ನೂ ತಳ್ಳಿಹಾಕಿದ್ದರು. ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಈ ಅಪರಾಧಿಗಳು ಮರಣ ದಂಡನೆಯ ಶಿಕ್ಷೆಗೆ ಕೊರಳೊಡ್ಡಲೇಬೇಕಾಯಿತು.
ನಿರ್ಭಯಾ ಹಂತಕರ ಗಲ್ಲು ಶಿಕ್ಷೆಯ ಪ್ರಕ್ರಿಯೆ ನಮ್ಮ ದೇಶದಲ್ಲಿ ಒಂದು ಇತಿಹಾಸ ಎಂಬಂತಾಯಿತು. ಒಂದೇ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಥಮ ಪ್ರಕರಣ ಇದಾಗಿದೆ.