ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಚುನಾವಣಾ ವಂಚನೆ ಆರೋಪವನ್ನು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ತಳ್ಳಿಹಾಕಿದ್ದಾರೆ. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಲಾಗಿದೆ ಮತ್ತು ಪ್ರತಿಗಳನ್ನು ಮಾನ್ಯತೆ ಪಡೆದ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
“ಭಾರತೀಯ ಚುನಾವಣಾ ಆಯೋಗವು ಈಗಾಗಲೇ ತಿಳಿಸಿದಂತೆ, ಮತದಾರರ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ. 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮೊದಲು ಕೈಗೆತ್ತಿಕೊಂಡ ವಿಶೇಷ ಸಾರಾಂಶ ಪರಿಷ್ಕರಣೆ-2024 ರ ಸಮಯದಲ್ಲಿ, ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಕರಡು ಮತ್ತು ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸೇರಿದಂತೆ ಎಲ್ಲಾ ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಒದಗಿಸಲಾಗಿದೆ, ”ಎಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಪಟ್ಟಿಗಳ ಕರಡು ಮತ್ತು ಅಂತಿಮ ಪ್ರಕಟಣೆಯ ನಡುವೆ, ಸುಮಾರು 9.17 ಲಕ್ಷ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣನೆಗೆ ಸ್ವೀಕರಿಸಲಾಗಿದೆ ಎಂದು ಅನ್ಬುಕುಮಾರ್ ಗಮನಸೆಳೆದಿದ್ದರೆ. ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯಲ್ಲಿ ತಪ್ಪು ಸೇರ್ಪಡೆ ಅಥವಾ ಅಳಿಸುವಿಕೆಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾದರೂ, ಆ ಸಮಯದಲ್ಲಿ ಯಾವುದೇ ಮೇಲ್ಮನವಿಗಳು ಬಂದಿಲ್ಲ ಎಂದು ಅವರ ಹೇಳಿಕೆಯು ಎತ್ತಿ ತೋರಿಸಿದೆ.
“ಕಾನೂನಿನ ಪ್ರಕಾರ, ಮತದಾರರ ಪಟ್ಟಿಯಲ್ಲಿ ತಪ್ಪು ಸೇರ್ಪಡೆ ಅಥವಾ ಅಳಿಸುವಿಕೆಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಯಾವುದೇ ಮೇಲ್ಮನವಿಗಳನ್ನು ಸ್ವೀಕರಿಸಲಾಗಿಲ್ಲ” ಎಂದು ಅನ್ಬುಕುಮಾರ್ ಹೇಳಿದರು.