ಬೆಂಗಳೂರು: ಕೊರೋನಾ ಆತಂಕ ರಾಜ್ಯದಿಂದ ದೂರವಾಗಿಲ್ಲ. ಆದರೆ ಕೆಲವು ಜಿಲ್ಲೆಗಳಲ್ಲಿ ಈ ವೈರಾಣು ಹಾವಳಿ ಕಡಿಮೆ ಇದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಒಂದೂ ಕೊರೋನಾ ಪಾಸಿಟಿವ್ ಪ್ರಕರಣಗಳಿಲ್ಲ. ಹಾಗಾಗಿ ಆ ಜಿಲ್ಲೆಗಳನ್ನು ಕೊರೋನಾ ಮುಕ್ತ ಜಿಲ್ಲೆಗಳೆಂದು ಘೋಷಿಸಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಮಧ್ಯೆ ರಾಜ್ಯದ 13 ಜಿಲ್ಲೆಗಳಲ್ಲಿ ಕೊರೋನಾ ಕೊರೋನಾ ಸೋಂಕು ಇಲ್ಲದಿರುವುದರಿಂದ ಅವುಗಳನ್ನು ಗ್ರೀನ್ ಜೋನ್ ಎಂದು ಗುರುತಿಸಿರುವ ಸರ್ಕಾರ ಆ ಪ್ರದೇಶಗಳಲ್ಲಿ ಲಾಕ್’ಡೌನ್ ನಿಯಮಗಳನ್ನು ಸಡಿಲಿಸಿದೆ. ಆದರೆ, ವಿನಾಯ್ತಿಯಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿದೆ.
ಚಾಮರಾಜನಗರ, ಕೊಪ್ಪಳ, ಕೋಲಾರ, ಉಡುಪಿ, ರಾಯಚೂರು, ಹಾವೇರಿ, ಯಾದಗಿರಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ. ರಾಮನಗರದಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಸಿಕ್ಕಿದೆ.
- ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಉದ್ಯಮಗಳಿಗೆ ಅವಕಾಶ.
- SEZ ಮತ್ತು EOU, ಕೈಗಾರಿಕಾ ವಲಯಗಳು ಮತ್ತು ಕೈಗಾರಿಕಾ ಟೌನ್ ಶಿಪ್ ಗಳಲ್ಲಿ ಉತ್ಪಾದನಾ ಘಟಕಗಳಿಗೆ ಅವಕಾಶ
- ಕಟ್ಟಡಗಳ ಆವರಣ ಇಲ್ಲವೇ ನೆರೆಯ ಸ್ಥಳದಲ್ಲೇ ಕಾರ್ಮಿಕರು ನೆಲೆಸಲು ಕಂಪೆನಿಗಳು ವ್ಯವಸ್ಥೆ ಕಲ್ಪಿಸಬೇಕು
- ಕಾರ್ಮಿಕರಿಗೆ ಕೆಲಸದ ಸ್ಥಳ ತಲುಪಲು ಸಾರಿಗೆ ವ್ಯವಸ್ಥೆಯನ್ನು ಆಯಾ ಸಂಸ್ಥೆಗಳೇ ಮಾಡಬೇಕು.
- ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ ಪ್ರಕಾರ ಹಾಗೂ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿಯಾಗಿರುವ ಅಂಗಡಿಗಳನ್ನು ತೆರೆಯಬಹುದು.
- ವಸತಿ ಸಂಕೀರ್ಣಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳಿಗೂ ಅವಕಾಶ
- ಎಲ್ಲಾ ಅಂಗಡಿಗಳಲ್ಲಿ ಶೇ. 50ರಷ್ಟು ಕಾರ್ಮಿಕರು ಮಾತ್ರ ಇರಬೇಕು
- ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.
ಈ ಮಧ್ಯೆ ರಾಜ್ಯದಲ್ಲಿ ಎಲ್ಲೂ ಮದ್ಯದಂಗಡಿಗಳನ್ನು ತೆರೆವುದಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಹೆಚ್ಚು ಕೋವಿಡ್ ಪ್ರಕರಣಗಳಿರುವ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಇನ್ನುಳಿದ ಜಿಲ್ಲೆಗಳ ಸ್ಥಿತಿಗತಿ ಪರಿಶೀಲಿಸಿ ಸಾಧ್ಯವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ.. ಖುಷಿಪಡಿಸೋ ರೌಡಿ ಬೇಬಿ