ದೆಹಲಿ: ದೇಶದಲ್ಲಿ ವೈರಾಣು ಕೊರೋನಾದ ನರ್ತನ ಮುಂದುವರಿದಿದ್ದು ಕಳೆದೆರಡು ದಿನಗಳಲ್ಲಿ ಏರಿಕೆಯಾದ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಬೆಚ್ಚಿಬೀಳುವುದಂತೂ ಖಚಿತ. ಕೊರೋನಾ ಸೋಂಕಿತರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ ಬರೊಬ್ಬರಿ 601 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.
ಈ ಪೈಕಿ ಬಹುಪಾಲು ಮಂದಿ ದೆಹಲಿ ನಿಜಾಮುದ್ದೀನ್’ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ತಬ್ಲಿಘಿ ಕಾರ್ಯಕರ್ತರಾಗಿದ್ದಾರೆ.
ಕೆಲ ದಿನಗಳ ಹಿಂದಿನವರೆಗೂ ಮಂದಗತಿಯಲ್ಲಿ ಪತ್ತೆಯಾಗುತ್ತಿದ್ದ ಕೋವಿಡ್-೧೯ ಸೋಂಕಿತರ ಸಂಖ್ಯೆ, ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಬಗ್ಗೆ ನಿಗಾ ವಹಿಸಿದ ನಂತರ ಬಹಳಷ್ಟು ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ನೀಡಿರುವ ಮಾಹಿತಿಯಂತೆ ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 3,07೦ ದಾಟಿದೆ. ಪೈಕಿ 1,023 ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರು.
ಈ ನಡುವೆ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಪತ್ತೆ ಮಾಡುವುದೇ ಪ್ರಯಾಸದ ಸಂಗತಿ. ಬಹಳಷ್ಟು ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಸಾಗಿದೆ.
ಇದೇ ವೇಳೆ. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಹಿಡಿದು, ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡು, ಕರೆ ವಿವರಗಳನ್ನು ಪರಿಶೀಲಿಸಬೇಕೆಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದು, ಆ ರಾಜ್ಯದಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಬಿಗಿಗೊಳಿಸಿದ್ದಾರೆ.