ಬೆಂಗಳೂರು: ದೀಪದ ಹೆಸರಲ್ಲಿ ಜನರು ಮನೆಯಿಂದ ಹೊರ ಬರುಂತಿಲ್ಲ. ಒಂದು ವೇಳೆ ನಿಯಮ ಮೀರಿ ಗುಂಪು ಸೇರಿದರೆ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಕೊರೋನಾ ವೈರಸ್ ಹಾವಳಿಯಿಂದ ದೇಶದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕೋವಿಡ್-19 ವೈರಾಣು ಹರಡುವಿಕೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು ಜನಸಾಮಾನ್ಯರು ಕಾನೂನಿನ ವ್ಯಾಪ್ತಿಯಲ್ಲಿ ಬಂಧಿಯಾಗಿದ್ದಾರೆ. ಈ ಸಂಧಿಕಾಲದಲ್ಲಿ ದೇಶವನ್ನು ಕಾಪಾಡಲು ಜನ ಒಗ್ಗಟ್ಟು ಪ್ರದರ್ಶಿಸಬೇಕೆಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕೆಲ ವಾರಗಳ ಹಿಂದಿನ ಜನತಾ ಕರ್ಫ್ಯೂ ರೀತಿಯಲ್ಲೇ ಈ ಭಾನುವಾರ ರಾತ್ರಿ ದೀಪೋತ್ಸವಕ್ಕೆ ಕರೆ ನೀಡಿದ್ದಾರೆ.ಜಗತ್ತಿನ ಅಂಧಕಾರವನ್ನು ತೊಲಗಿಸೋಣ, ಇದಕ್ಕಾಗಿ ಮನೆ ಮನೆಗಳಲ್ಲಿ ದೀಪ ಬೆಳಗಿಸೋಣ ಎಂದು ಅವರು ಕರೆ ಕೊಟ್ಟಿದ್ದಾರೆ.
ಈ ನಡುವೆ, ದೀಪಾರಾಧನೆ ಸಂದರ್ಭದಲ್ಲಿ ಅಭಿಮಾನದ ಪರಾಕಾಷ್ಠೆ ಮೆರೆದು ಲಾಕ್ ಡೌನ್ ಜಾರಿಗೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳೂ ಇವೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರಿಗೆ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ.
ಇದೇ ವೇಳೆ, ದೀಪದ ಹೆಸರಲ್ಲಿ ಜನರು ಗುಂಪು ಸೇರುವುದು, ಮೆರವಣಿಗೆ ಮಾಡುವುದು ಸೇರಿದಂತೆ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕಮೀಷನರ್ ಭಾಸ್ಕರ ರಾವ್ ಎಚ್ಚರಿಕೆ ನೀಡಿದ್ದಾರೆ.