ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಪಾಕಿಸ್ತಾನದ ನಿದ್ರೆಯನ್ನು ಭಂಗಪಡಿಸಿದ್ದು, ಅಲ್ಲಿನ ವಿನಾಶದ ಪ್ರಮಾಣ ಅಗಾಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದರು.
“ಭಾರತ ಇನ್ನು ಮುಂದೆ ಪರಮಾಣು ಬ್ಲ್ಯಾಕ್‌ಮೇಲ್‌ಗೆ ತಲೆಬಾಗುವುದಿಲ್ಲ. ಶತ್ರುಗಳು ದುಸ್ಸಾಹಸ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡುತ್ತವೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ” ಎಂದು ಅವರು ಎಚ್ಚರಿಸಿದರು.
ಪಹಲ್ಗಾಂಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಆಪ್ ಸಿಂಧೂರ್‌ನಲ್ಲಿ, ಭಾರತೀಯ ಸೈನಿಕರು ಶತ್ರು ಪ್ರದೇಶದೊಳಗೆ ನೂರಾರು ಕಿಲೋಮೀಟರ್ ನುಗ್ಗಿ ಭಯೋತ್ಪಾದಕರ ಕೇಂದ್ರ ಕಚೇರಿಯನ್ನು ಧ್ವಂಸ ಮಾಡಿದ ಉದಾಹರಣೆ ನೀಡಿದ ಮೋದಿ, “ನಮ್ಮ ಧೈರ್ಯಶಾಲಿ ಸೈನಿಕರು ಶತ್ರುಗಳಿಗೆ ಕಲ್ಪನೆಗೂ ಮೀರಿದ ಶಿಕ್ಷೆ ನೀಡಿದ್ದಾರೆ” ಎಂದರು.
“ಭಯೋತ್ಪಾದಕರು ಮತ್ತು ಅವರಿಗೆ ಆಶ್ರಯ ನೀಡುವವರಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಮಾನವೀಯತೆಗೆ ಸಮಾನ ಅಪಾಯ” ಎಂದು ಸ್ಪಷ್ಟಪಡಿಸಿದ ಪ್ರಧಾನಿ, 140 ಕೋಟಿ ಜನರ ಸಂಕಲ್ಪದ ಹಬ್ಬವಾಗಿ ಸ್ವಾತಂತ್ರ್ಯೋತ್ಸವವನ್ನು ವರ್ಣಿಸಿದರು.