ಪಂಚಮಸಾಲಿ ಮೀಸಲಾತಿ ವಿಚಾರ; ಮೋದಿ ಮಧ್ಯಸ್ಥಿಕೆಗೆ ಬಸವಜಯ ಮೃತ್ಯುಂಜಯ ಶ್ರೀ ಆಗ್ರಹ

ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಮೀಸಲಾತಿ ಎಂಬ ಯುಗಾದಿ ಬೆಲ್ಲವನ್ನು ಸಂಪುಟ ಸಭೆಯಲ್ಲಿ ಘೋಷಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ನಿರ್ದೇಶನ ನೀಡಬೇಕೆಂದು ಶ್ರೀಗಳು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ 2 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿಯವರು ಈ ಹಿಂದೆ ಭರವಸೆ ನೀಡಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಪಂಚಮಸಾಲಿ ಸಮುದಾಯ ಇದೀಗ ಮತ್ತೆ ಹೋರಾಟದ ಅಖಾಡಕ್ಕೆ ಧುಮುಕಿದೆ. ಶ್ರೀಗಳ ನೇತೃತ್ವದಲ್ಲಿ ಕಳೆದ 67 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಂಚಮಸಾಲಿ ಸಮುದಾಯದವರು ನಿರಂತರ ಸತ್ಯಾಗ್ರಹ ನಡೆಸುತ್ತಿದ್ದಾರೆ.

 

ಈ ನಡುವೆ ಇಷ್ಟೊಂದು ಸುದೀರ್ಘ ಹೋರಾಟ ನಡೆಯುತ್ತಿದ್ದರೂ ಬೊಮ್ಮಾಯಿ ಸರ್ಕಾರ ಯಾವುದೇ ರೀತಿ ಸ್ಪಂಧಿಸಿಲ್ಲ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಅವರ ಈ ನಿಲುವಿನಿಂದಾಗಿಯೇ ರಾಜ್ಯಾದ್ಯಂತ ಪಂಚಮಸಾಲಿ ಸಮಾಜದವರು ಬಿಜೆಪಿ ಪಕ್ಷ ಹಾಗೂ ಸರ್ಕಾರದ ಬಗ್ಗೆ ಆಕ್ರೋಶಗೊಂಡಿದ್ದಾರೆ ಎಂದು ಶ್ರೀಗಳು ಹೇಳದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿಯವರು ತಾಯಿ ಮೇಲೆ ಆಣೆ ಮಾಡಿ ಭರವಸೆ ನೀಡಿದ್ದರೂ ಅನಂತರ ನುಡಿದಂತೆ ನಡೆಯದೆ ವಂಚಿಸಿದ್ದಾರೆ. ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಮಧ್ಯಪ್ರವೇಶಿಸಿ, ಮಾರ್ಚ್ 24 ರ ಸಂಪುಟ ಸಭೆಯಲ್ಲಿ ನಮ್ಮ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ಸಂಬಂಧ ತೀರ್ಮಾನ ಕೈಗೊಳ್ಳುವಂತೆ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ನಿರ್ದೇಶನ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ. ಯುಗಾದಿ ಸಂದರ್ಭದಲ್ಲಿ ಬೆಲ್ಲದ ಸಿಹಿ‌ಬೇಡ, ಮೀಸಲಾತಿಯ ಖುಷಿ ನೀಡಿ ಎಂದೂ ಅವರು ಪ್ರಧಾನಿಯವರಿಗೆ ಸಂದೇಶ ರವಾನಿಸಿದ್ದಾರೆ.

ಮೀಸಲಾತಿಗಾಗಿ ನಡೆಯುತ್ತಿರುವ ಸತ್ಯಾಗ್ರಹ ಪೈಕಿ 67ನೇ ದಿನದ ಹೋರಾಟದಲ್ಲಿ ಭೋವಿ ಗುರುಪೀಠದ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಗೋಕಾಕ್ ಶೂನ್ಯಪೀಠ ಮುರುಘರಾಜೇಂದ್ರ ಸ್ವಾಮೀಜಿ, ಮಾಜಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕಾದ ಮಾನಪ್ಪ ವಜ್ಜಳ, ಕಾಂಗ್ರೆಸ್ ಮುಖಂಡ ರುದ್ರಯ್ಯ, ಆಮ್ ಆದ್ಮಿ ಪಕ್ಷದ ಸುಷ್ಮಾ ವೀರ್, ಬಿಎಂ ಬಿರಾದಾರ್ , ರುದ್ರಯ್ಯ ನವಲಿ, ನವೀನ ಗುಲಗಣ್ಣ ಮೊದಲಾದವರು ಭಾಗವಹಿಸಿದ್ದರು. ರಾಯಭಾಗ ಸಿದ್ದಾಪುರ ಶಿವನಗೌಡ, ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ, ಅಶೋಕ ಕೊಪ್ಪದ, ಮುದ್ಲಾಪುರ ದೊಡ್ಡಬಸಪ್ಪ ಎತ್ತಿನಮನಿ ಸಹಿತ ಅನೇಕ ಪ್ರಮುಖರು ಸತ್ಯಾಗ್ರಹದ ಮುಂಚೂಣಿಯಲ್ಲಿದ್ದು ಸರ್ಕಾರದ ನಿರ್ಲಕ್ಷ್ಯ ವಿರುದ್ದ ಆಕ್ರೋಶ ಹೊರಹಾಕಿದರು.

Related posts