‘ಪೇಪರ್‌ಲೆಸ್ ಹಗರಣ’: ರಾಜ್ಯ ಸರ್ಕಾರದ 250 ಕೋಟಿ ‘ಅಕ್ರಮ’ದ ಬಗ್ಗೆ ‘ಕೈ’ ಬಾಂಬ್

ಬೆಂಗಳೂರು: ಪರ್ಸಂಟೇಜ್ ಹಗರಣ ಸಹಿತ ಸಾಲು ಸಾಲು ಹಗರಣಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದದ ‘ಪೇಪರ್‌ಲೆಸ್ ಹಗರಣ’ದ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಗರಣ ಕುರಿತಂತೆ ದೂರು ನೀಡಿದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮಾಜಿ ಶಾಸಕ ರಮೇಶ್ ಬಾಬು ಆರೋಪಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು ಅವರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಹುಕೋಟಿ ಹಗರಣ ಕುರಿತು ಮಹತ್ವದ ಸಂಗತಿಗಳನ್ನು ಬೆಳಕಿಗೆ ತಂದರು.

ಕರ್ನಾಟಕ ವಿಧಾನಮಂಡಲದಲ್ಲಿ 250 ಕೋಟಿ ರೂ. ಹಗರಣದ ಕುರಿತು ಈಗಾಗಲೇ ಮಾಧ್ಯಮಗಳ ಮುಂದೆ ಚರ್ಚೆ ಮಾಡಿದ್ದೆ. ವಿಧಾನ ಮಂಡಲದಲ್ಲಿ ಕಾಗದ ರಹಿತ ವ್ಯವಸ್ಥೆ ತರಲು ಹೊರಟಿರುವ ಯೋಜನೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಚರ್ಚೆ ಮಾಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮೇ 22ರಂದೇ ಪತ್ರ ಬರೆದೆ. ನಂತರ ಅವರ ಆಪ್ತ ಕಾರ್ಯದರ್ಶಿಯನ್ನು ಭೇಟಿಯಾಗಿ ಸ್ಪೀಕರ್ ಭೇಟಿಗೆ ಸಮಯಾವಕಾಶ ಕೇಳಿದ್ದೆ. ಆದರೆ ಸ್ಪೀಕರ್ ಕಚೇರಿ ಯಾವುದೇ ಅವಕಶ. ನೀಡಿಲ್ಲ ಎಂದು ರಮೇಶ್ ಬಾಬು ಹೇಳಿದರು.

2017-18ರಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ವಿಧಾನಮಂಡಲದಲ್ಲಿ ಕಾಗದರಹಿತ ಯೋಜನೆ ಅಳವಡಿಸಲು 60 ಕೋಟಿ ಅನುದಾನ ಘೋಷಣೆ ಮಾಡಿ 20 ಕೋಟಿ ಬಿಡುಗಡೆ ಮಾಡಿತ್ತು. ನಂತರ ಕೇಂದ್ರ ಸರ್ಕಾರವಯ ‘ಒಂದು ದೇಶ ಒಂದು ವಿಧಾನ’ ಎಂಬ ಯೋಜನೆ ಘೋಷಣೆ ಮಾಡಿ ದೇಶದ ಎಲ್ಲ ವಿಧಾನಮಂಡಲದಲ್ಲಿ ಒಂದೇ ಮಾದರಿ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಇದಕ್ಕಾಗಿ ತಗಲುವ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡಿ, ಇದರ ವಾರ್ಷಿಕ ನಿರ್ವಹಣೆಯನ್ನು 5 ವರ್ಷ ಕೇಂದ್ರವೇ ಮಾಡಲಿದೆ ಎಂದು ಹೇಳಿತ್ತು. ಅಂದಿನ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿತ್ತು ಎಂದು ನೆನಪಿಸಿದರು.

ರಾಜ್ಯದಲ್ಲಿ ಇ ವಿಧಾನ್ ಜಾರಿ ಆದರೆ, ಇವರಿಗೆ ಕಮಿಷನ್ ಸಿಗುವುದಿಲ್ಲ ಎಂದು ಕೇಂದ್ರದ ಯೋಜನೆ ಪಡೆಯದೇ ಈ ಯೋಜನೆ ಗಾತ್ರವನ್ನು 250 ಕೋಟಿಗೆ ಏರಿಸಿ, ಕಿಯೋನಿಕ್ಸ್ ಜತೆ ಒಪ್ಪಂದ ಮಾಡಿಕೊಂಡು, ಕೇಂದ್ರದ ಯೋಜನೆ ಬದಲು ರಾಜ್ಯ ಸರ್ಕಾರದ ಹಣದಲ್ಲಿ ಯೋಜನೆ ಮಾಡಬೇಕು ಎಂದು ಸರ್ಕಾರದ ಮುಂದೆ ಇಡುತ್ತಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಗೆ 9-12-2020ರಲ್ಲಿ ಪತ್ರ ಬರೆದು, ಈ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಿದರೆ ಸಾರ್ವಜನಿಕರ ಹಣ ಪೋಲಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಇದನ್ನು ತಡೆಯುವಂತೆ ಸಲಹೆ ಮಾಡಿದ್ದರು. ನಂತರ ಈ ಯೋಜನೆಯನ್ನು ತಡೆ ಹಿಡಿಯಲಾಯಿತು. ನಂತರ ಕೆಲವು ಅಧಿಕಾರಿಗಳು ಹಣಕಾಸು ಸಚಿವಾಲಯ, ಮುಖ್ಯಮಂತ್ರಿ ಕಚೇರಿ ಮೇಲೆ ಒತ್ತಡ ಹೇರಿ 254 ಕೋಟಿ ಹಣ ಬಿಡುಗಡೆಗೆ ಪ್ರಯತ್ನಿಸುತ್ತಾರೆ ಎಂದು ಹಗರಣದ ಮಜಲುಗಳ ಬಗ್ಗೆ ವಿವರ ಒದಗಿಸಿದ ರಮೇಶ್ ಬಾಬು, ಈ ಬಗ್ಗೆ ತಾವು ಇ ಗವರ್ನೆಂನ್ಸ್ ಅಧಿಕಾರಿಯನ್ಬು ಭೇಟಿ ಮಾಡಿ ಮನವರಿಕೆ ಮಾಡಿರುವುದಾಗಿ ತಿಳಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಒಂದು ದೇಶ ಒಂದು ಚುನಾವಣೆ’ ಸೇರಿದಂತೆ ಹಲವು ವಿಚಾರವಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದಾಗ ಅವರದೇ ಕೇಂದ್ರದ ಯೋಜನೆ ಅಳವಡಿಸಬೇಕು. ರಾಜ್ಯದ ಹಣ ಉಳಿಸಬೇಕು ಎಂದು ಮುಖ್ಯಕಾರ್ಯದರ್ಶಿ ಹಾಗೂ ಇ ಗವರ್ನೆನ್ಸ್ ಅಧಿಕಾರಿಗಳಿ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಈ ವರೆಗೂ ಈ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷಗಳ ಆಗ್ರಹಕ್ಕೆ ಸ್ಪಂಧಿಸಿಲ್ಲ ಎಂದು ದೂರಿದ ರಮೇಶ್ ಬಾಬು, ಪ್ರಸಕ್ತ ಬೆಳಗಾವಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತಾದೃಷ್ಟಿ ಹಾಗೂ ರಾಜ್ಯದ ಜನರ ಹಣ ಪೋಲಾಗುವುದನ್ನು ತಡೆಯಲು ನಿಯಮ 69ರ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಇದನ್ನು ಪರಿಗಣಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ, ಸಮ್ಮಿಶ್ರ ಸರ್ಕಾರವನ್ನು ನಾವೇ ಬೀಳಿಸಿ ಕಾಂಗ್ರೆಸ್ ಕಚೇರಿ ಮುಂದೆಯಿಂದಲೇ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಿದ್ದೆ ಎನ್ನುತ್ತಿರುವ ಸಚಿವ ಅಶೋಕ್ ಅವರು. ಇನ್ನೂ 10 ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ ರಮೇಶ್ ಬಾಬು, ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಓಟು ಕೊಡಿತ್ತಾರೋ ನಿಮ್ಮ 40% ಭ್ರಷ್ಟಾಚಾರಕ್ಕೆ ಮನ್ನಣೆ ನೀಡುತ್ತಾರೋ ಎಂಬುದನ್ನು  ನೋಡೋಣ ಎಂದು ಸವಾಲು ಹಾಕಿದರು.

ಇವರು ಯಾವ ಚುನಾವಣೆ ಸಂದರ್ಭದಲ್ಲಿ ಪದ್ಮನಾಭ ನಗರ ಕ್ಷೇತ್ರ ಗೆಲ್ಲಲು ದೇವೇಗೌಡರ ಮನೆ ಬಾಗಿಲು ತಟ್ಟಿ ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂದು ನಾನು ಜನತಾ ದಳ ಪಕ್ಷದಲ್ಲಿದ್ದಾಗ ನೋಡಿದ್ದೇನೆ. ನಿಮ್ಮ ಪಿಎ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮ ಮಾಡಿ ಸಿಕ್ಕಿಬಿದ್ದಾಗ ಹೇಗೆ ಪಲಾಯನವಾದ ಮಾಡಿದ್ದೀರಿ ಎಂದೂ ಗೊತ್ತಿದೆ. ನಾವು ಹಲವು ಚುನಾವಣೆಗಳನ್ನು ನೋಡಿದ್ದೇವೆ. ಕರ್ನಾಟಕದ ಪ್ರಬುದ್ಧ ಮತದಾರ ಯಾವುದೇ ಚುನಾವಣೆಯಲ್ಲಿ ಬಿಜೆಪಿಗೆ 113 ಸ್ಥಾನ ನೀಡಿ ಆಶೀರ್ವಾದ ಮಾಡಿಲ್ಲ. ನೀವು ಮೋದಲು ಹೊಂದಾಣಿಕೆ ರಾಜಕಾರಣ ನಿಲ್ಲಿಸಿ. ನಿಮ್ಮ ಎಷ್ಟು ಶಾಸಕರು, ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ. 17 ವಲಸಿಗರ ಪೈಕಿ ಎಷ್ಟು ಮಂದಿ ಅತಂತ್ರರಾಗಿದ್ದಾರೆ ಎಲ್ಲವೂ ಗೊತ್ತಾಗಲಿದೆ ಎಂದವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನ ರಾಜಕಾರಣದಲ್ಲಿ ಹೊಂದಾಣಿಕೆ ರಾಜಕಾರಣದ ಕಿಂಗ್ ಅಶೋಕ್ ಅವರು. ನಿಮಗೆ ತಾಕತ್ತಿದ್ದರೆ ಹೊಂದಾಣಿಕೆ ರಾಜಕಾರಣ ಬಿಟ್ಟು, ಚುನಾವಣೆ ಗೆದ್ದು ಬನ್ನಿ. ಕಾಂಗ್ರೆಸ್ ವಿರುದ್ಧ ಹೇಳಿಕೆ ನಿಲ್ಲಿಸಿ. ಚರ್ಚೆಗೆ ಬರುವುದಾದರೆ ಬನ್ನಿ 2013, 2018ರ ಚುನಾವಣೆ ಹೇಗೆ ಗೆದ್ದಿದ್ದೀರಿ ಎಂದು ಎಲ್ಲವನ್ನು ಚರ್ಚಿಸಲು ಸಿದ್ಧ ಎಂದು ರಮೇಶ್ ಬಾಬು ಸವಾಲು ಹಾಕಿದರು.

Related posts