ಪಿಎಸ್ಐ ನೇಮಕಾತಿ ಅಕ್ರಮ: ಲಂಚ ಆರೋಪ ಬಗ್ಗೆ ಲೋಕಾಯುಕ್ತ ತನಿಖೆಗೆ ಪ್ರತಿಪಕ್ಷ ಪಟ್ಟು

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಳಿ ತನಿಖಾಧಿಕಾರಿ ಲಂಚ ಕೇಳಿದ್ದಾರೆಂಬ ಆರೋಪ ಬಗ್ಗೆ ಲೋಕಾಯುಕ್ತ ತನಿಖೆಗೆ ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಅವರು, ತನಿಖಾಧಿಕಾರಿಯು ಈ ಪ್ರಕರಣವನ್ನು ಮುಚ್ಚಿಹಾಕಲು 3 ಕೋಟಿ ಲಂಚ ಕೇಳಿದ್ದು, ಅದರಲ್ಲಿ 76 ಲಕ್ಷ ರೂ. ನೀಡಲಾಗಿದೆ. ಉಳಿದ 2.24 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಕೇವಲ ಎಸ್ಐ ಅಥವಾ ಅಧಿಕಾರಿಗಳು ಮಾತ್ರವಲ್ಲ, ಇಡೀ ವ್ಯವಸ್ಥೆಯೇ ಭಾಗಿಯಾಗಿದೆ. ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದ ಅರಗ ಜ್ಞಾನೇಂದ್ರ, ಈಗ ಪ್ರಮುಖ ಆರೋಪಿಯೇ ಪ್ರಕರಣದ ತನಿಖಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಾರೆಲ್ಲಾ ಆರೋಪಿಗಳನ್ನು ಮುಕ್ತಗೊಳಿಸಲು ಎಷ್ಟು ವಸೂಲಿ ಮಾಡಲಾಗಿದೆ ಎಂಬುದರ ಬಗ್ಗೆ ಲೋಕಾಯುಕ್ತದಿಂದ ವಿಸ್ತೃತ ತನಿಖೆಯಾಗಬೇಕು ಎಂದರು.

ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಂದ ಹಣಪಡೆದು ನಂತರ ಅವುಗಳನ್ನು ಹಿಂದಿರುಗಿಸುವುದಾಗಿ ಕೆಲವು ನಾಯಕರು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕೆಲವರು ಮಂತ್ರಿಗಳ ಹೆಸರು ಹೇಳಿದರೆ, ಮತ್ತೆ ಕೆಲವರು ಗೃಹ ಸಚಿವರು, ಮುಖ್ಯಮಂತ್ರಿಗಳು, ಡಿಜಿಪಿ ಅವರ ಹೆಸರು ಹೇಳುತ್ತಿದ್ದಾರೆ. ಬಂಧನವಾಗಿರುವ ಐಪಿಎಸ್ ಅಧಿಕಾರಿಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಗೃಹಲಕ್ಷ್ಮೀ ಯೋಜನೆ ಕೂಡ ಆಮಿಷ ಎಂಬ ಮುಖ್ಯಮಂತ್ರಿಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ, ‘ನಾವು ಏನೇ ಮಾತನಾಡಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಿದ್ದೇವೆ’ ಎಂದರು.

ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಸಂಗ್ರಹಿಸಿರುವ ಸಾವಿರಾರು ಕೋಟಿ ಹಣವನ್ನು ಮುಂಬರುವ ಚುನಾವಣೆಯಲ್ಲಿ ಹಂಚಲು ಮುಂದಾಗಿದೆ. ಆದರೂ ಐಟಿ, ಇಡಿ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿವೆ. ನಾನು ನನ್ನ ಸ್ವಂತ ಹಣದಲ್ಲಿ ಸಂಸದರಿಗೆ ಸಣ್ಣ ಉಡುಗೊರೆ ನೀಡಿದ್ದಕ್ಕೆ ಆದಾಯ ತೆರಿಗೆ ಅಧಿಕಾರಿಗಳು ನನಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅವರು ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದರು.

ಬಿಜೆಪಿ ಚುನಾವಣೆ ಗೆಲ್ಲದಿದ್ದರೂ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆ ಮೂಲಕ ಹಣಬಲದ ಮೂಲದ ಚುನಾವಣೆಯನ್ನು ನಿಯಂತ್ರಿಸಲು ಬಿಜೆಪಿ ಮುಂದಾಗಿದೆ ಎಂದು ದೂರಿದರು.

Related posts