ವಾರಾಣಸಿ: ಅಯೋಧ್ಯೆ ರಾಮ ಜನ್ಮ ಭೂಮಿ ಇದೀಗ ಹಿಂದೂಗಳ ಕೈ ಸೇರಿದ್ದು, ಅದರ ಬೆನ್ನಲ್ಲೇ ಕಾಶೀ ವಿಶ್ವನಾಥನ ಸನ್ನಿಧಿಯ ಮಾತುಗಳೂ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣ ಸದ್ಯದಲ್ಲಿಯೇ ಹೊಸ ರೂಪ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನರೇಂದ್ರ ಮೋದಿ, ವಾರಣಾಸಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಅಯೋಧ್ಯೆಯಲ್ಲಿನ ರಾಮ ಮಂದಿರ ನೈಜ ರೂಪ ಪಡೆದುಕೊಳ್ಳಲಿದೆ. ಅದರ ಜೊತೆಯಲ್ಲೇ ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣ ಸದ್ಯದಲ್ಲಿಯೇ ಹೊಸ ರೂಪ ಪಡೆಯಲಿದೆ ಎಂದರು.
ಸಿಎಎ ಕಾಯಿದೆ ಜಾರಿ ಹಾಗೂ ಕಲಂ 370 ರದ್ದು ಕುರಿತಂತೆಯೂ ಅವರು ಮಾತನಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿರ್ಧಾರವನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.