ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ’ಸಂವಿಧಾನ ಫಲಕ’ ಅನಾವರಣ

ಮಂಗಳೂರು: ದೇಶಾದ್ಯಂತ ಬುಧವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳು ದೇಶಭಕ್ತಿಯ ಪ್ರತೀಕ ಎಂಬಂತೆ ನೆರವೇರಿದವು. ಅದರಲ್ಲೂ ಮಂಗಳೂರಿನಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಂವಿಧಾನ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.

ದೇಶದ ಸಾಮಾಜಿಕ ವ್ಯವಸ್ಥೆಗೆ ಆಧಾರವಾಗಿರುವ, ಸುರಕ್ಷಾ ಮಂತ್ರವೆನಿಸಿರುವ ‘ಸಂವಿಧಾನ’ ಕುರಿತಂತೆ ಒಂದು ದಿಂದಾದ ಶ್ರದ್ದೆ-ಭಕ್ತಿಯಲ್ಲ, ಪ್ರತೀ ದಿನವೂ ಸಂವಿಧಾನದ ಆಶಯಗಳನ್ನು ನೆನೆಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ (ಇಂದಿರಾ ಜನ್ಮ ಶತಾಬ್ದಿ ಭವನ) ಭವನದಲ್ಲಿ ‘ಸಂವಿಧಾನ ಫಲಕ’ವನ್ನು ಅನಾವರಣ ಮಾಡಲಾಗಿದೆ.


ಖ್ಯಾತ ವಕೀಲರೂ ಆದ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿರುವ ಮನೋರಾಜ್ ರಾಜೀವ್ ಅವರ ಪರಿಕಲ್ಪನೆಯಲ್ಲಿ ಈ ಸಂವಿಧಾನ ಫಲಕವನ್ನು ಸ್ಥಾಪಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಿಧಾನದ ಪೀಠಿಕೆ ಹಾಗೂ ಮಧ್ಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರುವ ಈ ಫಲಕ ಎಲ್ಲರ ಗಮನಕೇಂದ್ರೀಕರಿಸುತ್ತಿದೆ.

ಸಂವಿಧಾನ ದಿನಾಚರಣೆಯ ಭಾಗವಾಗಿ ‘ಸಂವಿಧಾನ ಓದು’ ಕಾರ್ಯಕ್ರಮದ ಜೊತೆಯಲ್ಲೇ ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ.ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಮತ್ತು ಮಾಹಿತಿ ಹಕ್ಕು ಘಟಕದ ಮನೋರಾಜ್ ರಾಜೀವ್ ಉಪಸ್ಥಿತಿಯಲ್ಲಿ ಈ ಫಲಕವನ್ನು ಅನಾವರಣ ಮಾಡಲಾಯಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಾನಾಥ ರೈ, ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಗಳನ್ನು ಗೌರವಿಸುತ್ತಾ ಬಂದಿದೆ. ಹಾಗಾಗಿ ಜಾತ್ಯತೀತಯೆಯ ಪರಿಕಲ್ಪನೆಯನ್ನು ಅನುಸರಿಸುತ್ತಿದೆ ಎಂದರು.

ಮಾಜಿ ಸರ್ಕಾರಿ ವಕೀಲರೂ ಆದ ಮನೋರಾಜ್ ರಾಜೀವ್ ಮಾತನಾಡಿ, ಸಂವಿಧಾನದ ಹಕ್ಕು, ಕರ್ತವ್ಯ, ಜಾತ್ಯತೀತತೇ, ಸಮಾಜವಾದದ ಸೂಕ್ಷ್ಮತೆ, ಆದ್ಯತೆ, ಬಾಧ್ಯತೆ ಹಾಗೂ ಸಂವಿಧಾನ ರಚನೆಯ ಇತಿಹಾಸಗಳತ್ತ ಬೆಳಕುಚೆಲ್ಲಿದರು. ಸಂವಿಧಾನದ ಆಶಯದಂತೆ ಕಾಂಗ್ರೆಸ್ ಪಕ್ಷವು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುತ್ತಿದೆ. ಆ ಸಂಬಂಧವಾಗಿಯೇ ರಾಜ್ಯವನ್ನು ಸರ್ವ ಜನಾಂಗಗಳ ತೋಟವನ್ನಾಗಿಸುವ ಕಾರ್ಯಕ್ರಮವನ್ನು ಘೋಷಿಸಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರ ಹಲವಾರು ಜನಪರ ಆಡಳಿತ ನಡೆಸುತ್ತಿದ್ದು, ಅಭಿವೃದ್ಧಿ ಕೆಲಸಗಳಿಗೂ ವೇಗ ನೀಡಿದೆ ಎಂದರು. ಕರಾವಳಿ ಜಿಲ್ಲೆಗಳಿಗೂ ಹಲವಾರು ಯೋಜನೆಗಳ ಕೊಡುಗೆಗಳನ್ನು ಸರ್ಕಾರ ನೀಡಿದು, ಮಂಗಳೂರನ್ನು ಮಾದರಿ ನಗರವನ್ನಾಗಿಸುವ ಸರ್ಕಾರದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಚಿವರು, ವಿವಿಧ ವಿಧಾನ ಸಭಾ ಕ್ಷೇತ್ರಗಳ ಕಾನೂನು ಘಟಕದ ಪದಾಧಿಕಾರಿಗಳು, ವಕೀಲರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related posts