‘ಅಸೆಂಬ್ಲಿ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆಯನ್ನು ಸೋಲಿಸಿಯೇ ಸಿದ್ಧ’: ತೊಡೆತಟ್ಟಿದ ಬಿಜೆಪಿ ನಾಯಕ

ಬೆಂಗಳೂರು: ರಾಜ್ಯದ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸಿಯೇ ಸಿದ್ಧ ಎಂದು ತೊಡೆ ತಟ್ಟಿ ಹೇಳುವುದಾಗಿ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ಅವರು ಪಣ ತೊಟ್ಟಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸುವುದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತೊಡೆ ತಟ್ಟಿ ಹೇಳಿದ್ದೆ. ಅದನ್ನು ಈಡೇರಿಸಿದ್ದೇನೆ ಎಂದು ತಿಳಿಸಿದರು. ನಮ್ಮ ಶಕ್ತಿ, ಸಾಮಥ್ರ್ಯವನ್ನು ನೀವು ಅರ್ಥವೇ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಇಡೀ ಕಲ್ಯಾಣ ಕರ್ನಾಟಕವೇ ಬಿಜೆಪಿಮಯ ಆಗಲಿದೆ ಎಂದು ನುಡಿದರು. ನಾನು 5 ಸಲ ಗೆದ್ದಿದ್ದು, ನನ್ನದು ತೆರೆದ ಇತಿಹಾಸ. ಕಲ್ಯಾಣ ಕರ್ನಾಟಕದಲ್ಲಿ ನಾನು ಏನು ಎಂಬುದು ತೆರೆದ ಪುಸ್ತಕ. ಅದು ತೆರೆದ ಕನ್ನಡಿಯಂತಿದೆ. 2023ರಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಾನು ಮತ್ತು ರವಿಕುಮಾರ್ ಏನೆಂದು ತೋರಿಸುತ್ತೇವೆ. ಪ್ರಭಾವಿ ನಾಯಕರಾದ ನಳಿನ್‍ಕುಮಾರ್ ಕಟೀಲ್, ಬೊಮ್ಮಾಯಿ, ಮಹಾನ್ ನೇತಾರ ಯಡಿಯೂರಪ್ಪ ಅವರ ಸಹಕಾರದೊಂದಿಗೆ ನಾವು ಈ ಭಾಗದಲ್ಲಿ 41 ಸೀಟುಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಜಯಶಾಲಿ ಆಗಲಿದ್ದೇವೆ ಎಂದು ವಿಶ್ವಾಸದಿಂದ ನುಡಿದರು.

ನಾನು ಕಾಂಗ್ರೆಸ್ ಸೇರುವುದಾಗಿ ಮಾಧ್ಯಮಗಳಲ್ಲಿ ಬಂದಿದೆ. ಅದು ಮಾಧ್ಯಮಗಳ ಸೃಷ್ಟಿ. ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯ ಇಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ. ನಾನು ಬಿಜೆಪಿಯಲ್ಲೇ ಸಾಯುತ್ತೇನೆ. ತಾಯಿ ಪಕ್ಷ ಬಿಜೆಪಿ. ತಾಯಿಗೆ ಎಂದೂ ಮಗ ದ್ರೋಹ ಮಾಡುವುದಿಲ್ಲ. ನಾನು ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಉಪಸ್ಥಿತರಿದ್ದರು.

Related posts