ಬೆಂಗಳೂರು ‘ಕಂಬಳ’ದಲ್ಲಿ ಪದಕ ಗೆದ್ದಿದ್ದು ಪುತ್ತೂರಿನ ಕೋಣಗಳು; ನಾಯಕನಾಗಿ ಮಿಂಚಿದ್ದು ‘ಜೈ ತುಳುನಾಡು’ ಕಿಶೋರ್ ಭಂಡಾರಿ

ಮಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ‘ಕಂಬಳ’ ಇಡೀ ದೇಶದ ಗಮನಸೆಳೆಯಿತು. ತುಳುನಾಡಿಗೆ ಸೀಮಿತ ಎಂಬಂತಿದ್ದ ‘ಕಂಬಳ’ವು ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನದ ಫಲವಾಗಿ ರಾಜ್ಯ ರಾಜಧಾನಿಯಲ್ಲೂ ಕಲರವ ಸೃಷ್ಟಿಸಿ ‘ಮಹಾಹಬ್ಬ’ವಾಗಿ ಕುತೂಹಲದ ಕೇಂದ್ರಬಿಂದುವಾಯಿತು. ಪದಕ ಗೆದ್ದ ಕೋಣಗಳು ತವರಿಗೆ ತಲುಪಿದಾಗ ಕಂಡುಬಂದ ಉತ್ಸಾಹ ಕೂಡಾ ಚಾರಿತ್ರಿಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಬೆಂಗಳೂರು ಕಂಬಳದಲ್ಲಿ 200ಕ್ಕೂ ಹೆಚ್ಚು ದೈತ್ಯ ಕೋಣಗಳು ಭಾಗವಹಿಸಿ ರೋಚಕತೆ ತುಂಬಿದ್ದವು. ಎಲ್ಲಾ ಕಂಬಳ ಕೋಣಗಳ ತಂಡಗಳ ಸೆಣಸಾಟದಲ್ಲಿ ಪದಕವನ್ನು ಬಾಚಿರುವ ಬೊಟ್ಯಾಡಿ ಕಿಶೋರ್ ಭಂಡಾರಿ ಮುಂದಾಳುತ್ವದ ಯುವಕರ ಪಡೆಯಾದ ‘ಜೈ ತುಳುನಾಡು ಪುತ್ತೂರು’ ತಂಡದ ಕೋಣಗಳು ಚಿನ್ನದ ಪುರಸ್ಕಾರದೊಂದಿಗೆ ಗೆದ್ದು ಬೀಗಿದೆ. ನೇಗಿಲು ಕಿರಿಯ (ಜೂನಿಯರ್) ವಿಭಾಗದಲ್ಲಿ ಕಿಶೋರ್ ಭಂಡಾರಿ ಅವರ ಕೋಣಗಳು ಚಿನ್ನದ ಪದಕ ಹಾಗೂ 50,000 ರೂಪಾಯಿ ಜಯಿಸಿ ತುಳುನಾಡಿನ ಜನರ ಹರ್ಷವನ್ನು ಮುಗಿಲೆತ್ತರ ರಾಚುವಂತೆ ಮಾಡಿವೆ.

 

View this post on Instagram

 

A post shared by Namma Kudla™ (@nammakudla24x7)

ಈ ‘ಜೈ ತುಳುನಾಡು ಪುತ್ತೂರು’ ಕಂಬಳ ಕೋಣಗಳನ್ನು ಚಿನ್ನದ ಪದಕ ಹಾಗೂ ದೈತ್ಯ ಟ್ರೋಫಿಯೊಂದಿಗೆ ತವರೂರು ತಲುಪಿದಾಗ ತಾಯ್ನಾಡಿನ ಯುವಕರ ವಿಜಯದುಂದುಭಿಯ ಝೇಂಕಾರ ಕಂಬಳ ಪ್ರೀಯರ ಉತ್ಸಾಹವನ್ನು ನೂರ್ಮಡಿಗೊಳಿಸಿತು. ಕಿಶೋರ್ ಭಾಂಡಾರಿ ನೇತೃತ್ವದ ಯುವಕರ ಪಡೆಯನ್ನು ತವರೂರು ಪುತ್ತೂರಿನ ಜನತೆ ಅಧೂರಿಯಾಗಿ ಸ್ವಾಗತಿಸಿದರು.

ಬೆಂಗಳೂರು ಕಂಬಳವು ಉದ್ಯಮಿಗಳ ಯಶೋಗಾಥೆಗೆ ಸಾಕ್ಷಿಯೆಂದು ಹೇಳಲಾಗುತ್ತಿದೆಯಾದರೂ ‘ಕಂಬಳ ವೀರಾರಾಗಿ’ ಮಿಚಿರುವುದು ಜೈ ತುಳುನಾಡು ಕಂಬಳ ತಂಡದ ಯುವಕರೇ. ಹಾಗಾಗಿ ಈ ತಂಡದ ಮುಂದಾಳುತ್ವ ವಹಿಸಿದ್ದ ಬೊಟ್ಯಾಡಿ ಕಿಶೋರ್ ಭಂಡಾರಿ ಇಡೀ ಕರಾವಳಿಯಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಪ್ರಕಾಶ್ ಶೆಟ್ಟಿ – ಅಶೋಕ್ ರೈ – ಕಿಶೋರ್ ಭಂಡಾರಿ

‘ಕಾಂತಾರ’ ಸಿನಿಮಾ ನಂತರ ಕಂಬಳ ಬಗ್ಗೆ ಜನರ ಆಸಕ್ತಿ ನೂರ್ಮಡಿಗೊಂಡಿದೆ. ಅದರ ಫಲವಾಗಿಯೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಕಂಬಳ’ ನೋಡಲು ಜನಸಾಗರವೇ ಹರಿದು ಬಂದಿತ್ತು. ಈ ಮಹಾ ವೈಭವವನ್ನು ಕಂಡ ವಿಶ್ಲೇಷಕರು ಶಾಸಕ ಅಶೋಕ್ ರೈ ಅವರ ಯಶಸ್ಸನ್ನು ಕೊಂಡಾಡಿದರು. ಜೊತೆಗೆ, ಕಂಬಳ ಸಮಿತಿಯ ಪ್ರಮುಖರಲ್ಲೊಬ್ಬರಾಗಿರುವ ಉದ್ಯಮಿ ಗೋಲ್ಡ್ ಪಿಂಚ್ ಪ್ರಕಾಶ್ ಶೆಟ್ಟಿ ಅವರನ್ನು ರಾಜಕೀಯವಾಗಿ ಗುರುತಿಸಿಕೊಳ್ಳುವಂತೆ ಮಾಡಿತು. ಮಂಗಳೂರಿನ ಬಂಟ ಸಮುದಾಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರತಿಸ್ಪರ್ಧಿ ಎಂಬಂತೆಯೂ ಗೋಲ್ಡ್ ಪಿಂಚ್ ಪ್ರಕಾಶ್ ಶೆಟ್ಟಿ ಗುರುತಾಗಿದ್ದಾರೆ. ಆದರೆ ಈ ದಿಗ್ಗಜರ ನಡುವೆಯೂ ತುಳುನಾಡಿನ ಮಂದಿಯು ನಾಯಕತ್ವವನ್ನು ಗುರುತಿಸಿಕೊಂಡದ್ದು ‘ಬೊಟ್ಯಾಡಿ ಕಿಶೋರ್ ಭಂಡಾರಿ’ಯಲ್ಲಿ. ಯಾಕೆಂದರೆ ಇಡೀ ಕಂಬಳದಲ್ಲಿ ಪದಕ ಗೆದ್ದ ಕೋಣಗಳು ಬಿಜೆಪಿ ಯುವ ನಾಯಕ ಬೊಟ್ಯಾಡಿ ಕಿಶೋರ್ ಭಂಡಾರಿ ಅವರ ತಂದದ್ದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಈ ಯುವಕರೊಂದಿಗೆ ಜಯಘೋಷ ಮೊಳಗಿಸಿದ್ದೇ ಅಚ್ಚರಿಯ ಸನ್ನಿವೇಶ.

ಪುತ್ತೂರಿನ ‘ಜೈ ತುಳುನಾಡು’ ಕಂಬಳ ತಂಡದ ಈ ಕೋಣಗಳ ಯಶೋಗಾಥೆ ಬೆಂಗಳೂರು ಕಂಬಳದಲ್ಲಷ್ಟೇ ಅಲ್ಲ. ‘ಕಂಬಳ ತವರು’ ತುಳುನಾಡಿನಲ್ಲಿ ಪ್ರತೀ ವರ್ಷವೂ ಈ ಕೋಣಗಳು ಪ್ರಶಸ್ತಿಗಳನ್ನು ಗೆಲ್ಲುತ್ತಲೇ ಬಂದಿವೆ. ನೂರಕ್ಕೂ ಹೆಚ್ಚು ಪದಕಗಳನ್ನು ಕೊರಳಿಗೇರಿಸಿರುವ ‘ಜೈ ತುಳುನಾಡು ಪುತ್ತೂರು’ ಕಂಬಳ ಕೋಣಗಳು ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಕೋಣಗಳ ಶೌರ್ಯದ ನಡುವೆ ‘ವೀರತ್ವ’ ಪ್ರದರ್ಶಿಸಿದೆ.

ಈ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖರು ಈ ಯಶೋಗಾಥೆಯ ಹಿಂದೆ ಬೊಟ್ಯಾಡಿ ಕಿಶೋರ್ ಭಂಡಾರಿ ಅವರ ಪ್ರಯತ್ನ ಇದೆ. ಅವರ ನಾಯಕತ್ವದಲ್ಲಿ ಯುವಕರು ತೋರಿದ ಶ್ರದ್ದಾ ಭಕ್ತಿಯೂ ಯಶಸ್ಸಿಗೆ ಆಧಾರವಾಯಿತು ಎಂದು ಬಣ್ಣಿಸಿದ್ದಾರೆ. ಈ ಕಂಬಳ ಕೋಣಗಳನ್ನು ಓಡಿಸಿರುವ ಕೃತಿಕ್ ಗೌಡ ಹಾಗೂ ಜೈ ತುಳುನಾಡು ಪುತ್ತೂರು ತಂಡದ ಸಂಪತ್ ಶೆಟ್ಟ ಪಣಕಜೆ, ಪ್ರವೀಣ್ ಪುತ್ತೂರು, ಮಂಜುನಾಥ್ ನಾಯಕ್, ವಿಠಲ ಭಂಡಾರಿ, ವಿಜಯ ಶೆಟ್ಟಿ ಮುಂಬಯಿ ಇವರ ಪಾತ್ರ ಕೂಡಾ ಗಮನಾರ್ಹ.

ಬೊಟ್ಯಾಡಿ ಕಿಶೋರ್ ಭಂಡಾರಿ ಅವರು ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವವನ್ನು ರೂಢಿಸಿಕೊಂಡವರು. ಎಬಿವಿಪಿ ಸಂಘಟನೆಯಲ್ಲಿ ನಾಯಕರಾಗಿದ್ದ ಅವರು ಹಲವು ವರ್ಷಗಳ ಕಾಲ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿದ್ದರು. ವರ್ಷಗಳ ಹಿಂದೆ ಬಿಜೆಪಿ ಕೈಗೊಂಡಿದ್ದ ಕಾಶ್ಮೀರ ಚಲೋ ಕಾರ್ಯಕ್ರಮದಲ್ಲಿ ಕರ್ನಾಟದ ಯುವಕರ ಪಡೆಯ ನೇತೃತ್ವವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿಯದ್ದ ಬೊಟ್ಯಾಡಿ ಕಿಶೋರ್ ಭಂಡಾರಿ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಕಣಕ್ಕಿಳಿಸಲು ಆರೆಸ್ಸೆಸ್-ಬಿಜೆಪಿ ನಾಯಕರು ಮುಂದಾದರಾದರೂ ಅನಿರೀಕ್ಷಿತ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬೇರೊಬ್ಬರು ಅಭ್ಯರ್ಥಿಯಾದರು. ಆದರೆ ಪ್ರತಿಯೊಂದು ವಿಚಾರದಲ್ಲೂ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವ ಕಿಶೋರ್ ಭಂಡಾರಿ ಅವರಿಗೆ ಈ ಬಾರಿ ಬೆಂಗಳೂರು ಕಂಬಳದ ನಂತರ ‘ತುಳುನಾಡ ಯುವಕರು ಜೈ’ ಎನ್ನುತ್ತಿದ್ದಾರೆ. ಈ ತಂಡದ ಕಂಬಳ ಕೋಣಗಳು ‘ಶತಕ ಪದಕ’ಗಳ ಜೊತೆಯಲ್ಲೇ ಬೆಂಗಳೂರಿನಲ್ಲೂ ಚಿನ್ನದ ಪದಕ ಗೆದ್ದಿರುವುದರಿಂದ ‘ಜೈ ತುಳುನಾಡು ಯುವಕರ ಪಾಲಯದಲ್ಲೂ ಎಂದಿಲ್ಲದ ಸಂಭ್ರಮಕ್ಕೆ ಕಾರಣವಾಗಿದೆ.

Related posts