ಬೆಂಗಳೂರು ‘ಕಂಬಳ’ದಲ್ಲಿ ಪದಕ ಗೆದ್ದಿದ್ದು ಪುತ್ತೂರಿನ ಕೋಣಗಳು; ನಾಯಕನಾಗಿ ಮಿಂಚಿದ್ದು ‘ಜೈ ತುಳುನಾಡು’ ಕಿಶೋರ್ ಭಂಡಾರಿ

ಮಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ‘ಕಂಬಳ’ ಇಡೀ ದೇಶದ ಗಮನಸೆಳೆಯಿತು. ತುಳುನಾಡಿಗೆ ಸೀಮಿತ ಎಂಬಂತಿದ್ದ ‘ಕಂಬಳ’ವು ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನದ ಫಲವಾಗಿ ರಾಜ್ಯ ರಾಜಧಾನಿಯಲ್ಲೂ ಕಲರವ ಸೃಷ್ಟಿಸಿ ‘ಮಹಾಹಬ್ಬ’ವಾಗಿ ಕುತೂಹಲದ ಕೇಂದ್ರಬಿಂದುವಾಯಿತು. ಪದಕ ಗೆದ್ದ ಕೋಣಗಳು ತವರಿಗೆ ತಲುಪಿದಾಗ ಕಂಡುಬಂದ ಉತ್ಸಾಹ ಕೂಡಾ ಚಾರಿತ್ರಿಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬೆಂಗಳೂರು ಕಂಬಳದಲ್ಲಿ 200ಕ್ಕೂ ಹೆಚ್ಚು ದೈತ್ಯ ಕೋಣಗಳು ಭಾಗವಹಿಸಿ ರೋಚಕತೆ ತುಂಬಿದ್ದವು. ಎಲ್ಲಾ ಕಂಬಳ ಕೋಣಗಳ ತಂಡಗಳ ಸೆಣಸಾಟದಲ್ಲಿ ಪದಕವನ್ನು ಬಾಚಿರುವ ಬೊಟ್ಯಾಡಿ ಕಿಶೋರ್ ಭಂಡಾರಿ ಮುಂದಾಳುತ್ವದ ಯುವಕರ ಪಡೆಯಾದ ‘ಜೈ ತುಳುನಾಡು ಪುತ್ತೂರು’ ತಂಡದ ಕೋಣಗಳು ಚಿನ್ನದ ಪುರಸ್ಕಾರದೊಂದಿಗೆ ಗೆದ್ದು ಬೀಗಿದೆ. ನೇಗಿಲು ಕಿರಿಯ (ಜೂನಿಯರ್) ವಿಭಾಗದಲ್ಲಿ ಕಿಶೋರ್ ಭಂಡಾರಿ ಅವರ ಕೋಣಗಳು ಚಿನ್ನದ ಪದಕ ಹಾಗೂ 50,000 ರೂಪಾಯಿ ಜಯಿಸಿ ತುಳುನಾಡಿನ ಜನರ ಹರ್ಷವನ್ನು ಮುಗಿಲೆತ್ತರ ರಾಚುವಂತೆ ಮಾಡಿವೆ.  …