ರಾಮಲಿಂಗಾ ರೆಡ್ಡಿ ಅವರು ಇನ್ನು ಕನಿಷ್ಠ 10 ವರ್ಷಗಳ ಅವಧಿಗೆ ಮುಜರಾಯಿ ಸಚಿವರಾಗಿರಬೇಕು ಅರ್ಚಕರ ಸಮಾವೇಶದಲ್ಲಿ ಮೂಡಿಬಂದ ಕೂಗು‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶ ಗಮನಸೆಳೆಯಿತು. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಕೊಡುಗೆಗಳ ಬಗ್ಗೆ ಅರ್ಚಕ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿತು.

ಈ ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಎ, ಬಿ ಮತ್ತು ಸಿ ವರ್ಗದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಸದಾ ಅವರ ಏಳಿಗೆಗಾಗಿ ಸುಮಾರು 50 ವರ್ಷಗಳಿಂದ ಸರ್ಕಾರದೊಡನೆ ಹೋರಾಡುತ್ತಿರುವ ಹಿಂದು ಧಾರ್ಮಿಕ ಸರ್ವ ಸಮಾಜದ ದೇವಾಲಯಗಳ ನೌಕರರನ್ನು ಒಳಗೊಂಡಿರುವ ಸಂಸ್ಥೆಯಾಗಿರುತ್ತದೆ. ಸೋಮವಾರ ನಡೆದ ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅರ್ಚಕರುಗಳು ಕಿಕ್ಕಿರಿದು ನೆರೆದಿದ್ದರು.

ಸಮಾವೇಶದಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರು, ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ ನಮ್ಮ ಮುಜರಾಯಿ ಇಲಾಖೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿರುವುದು ಶುಭ ಸಂಕೇತ ಎಂದು ಗುಣಗಾನ ಮಾಡಿದರು.

ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಯಾವುದೇ ಖಾತೆ ನೀಡಲಿ ಆದರೆ ಮುಜರಾಯಿ ಖಾತೆಯೂ ಆ ಖಾತೆಯೊಂದಿಗೆ ಇರಬೇಕು ಇನ್ನು ಕನಿಷ್ಠ 10 ವರ್ಷಗಳ ಅವಧಿಗೆ ಶ್ರೀ ರಾಮಲಿಂಗಾ ರೆಡ್ಡಿ ಅವರು ಮುಜರಾಯಿ ಸಚಿವರಾಗಿರಬೇಕು ಇದು ನಮ್ಮ ಅಭಿಲಾಷೆ ಹಾಗೂ ಕೂಗು ಎಂದು ಅರ್ಚಕರ ಸಂಘಟನೆಗಳ ಮುಖಂಡರು ಪ್ರತಿಪಾದಿಸಿದರು.

ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು ಅದಕ್ಕೆ‌ ನಮ್ಮ ವಿರೋಧವಿದೆ. ಖಾಸಗಿಯವರು ವ್ಯಾಪಾರದ ದೃಷ್ಟಿಯಿಂದಷ್ಟೇ ದೇವಸ್ಥಾನವನ್ನು ನೋಡುತ್ತಾರೆ. ಧರ್ಮವನ್ನು ಉಳಿಸುವ ಅಥವಾ ದೇವರ ಸೇವೆಯನ್ನು ಮಾಡುವ ನಮ್ಮಂತಹ ಅರ್ಚಕರ ಬಗ್ಗೆ ಅವರಿಗೆ ಯಾವುದೇ ಕನಿಕರವಿರುವುದಿಲ್ಲ. ನಮಗಾಗಿ ಯಾವುದೇ ಯೋಜನೆಗಳನ್ನು ತರುವ ಪ್ರಯತ್ನ ಕೂಡ ನಡೆಯುವುದಿಲ್ಲ ಎಂದು ಅನೇಕ ಅರ್ಚಕರು ಸರ್ಕಾರದ ಗಮನಸೆಳೆದರು.

ರಾಜ್ಯದಲ್ಲಿರುವ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ, 34,166 ಸಿ ವರ್ಗದ ದೇವಾಲಯಗಳಿದ್ದು, ರಾಜ್ಯಪಾಲರು ಕಾಯ್ದೆಗೆ ಅನುಮೋದನೆ ನೀಡಿದ ಕೂಡಲೇ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ ಎಂದರು.

ಈವರೆಗೆ ಬಡ ಅರ್ಚಕರುಗಳ ಬಗ್ಗೆ ಯಾರೋಬ್ಬರೂ ಕಾಳಜಿವಹಿಸಿರಲಿಲ್ಲ. ಸಚಿವ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಹಾಗೂ ಕಾಳಜಿ ಪರ ನಡೆಯು ಫಲವಾಗಿ ಮಸೂದೆಯು ನಮಗೊಂದು ಭರವಸೆ ಮೂಡಿಸಿದೆ. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ನಮ್ಮಂತಹ ಸಹಸ್ರಾರು ಅರ್ಚಕರು, ನೌಕರರ ಪಾಲಿಗೆ ನೋವುಂಟು ಮಾಡಿದೆ ಎಂದ ಅರ್ಚಕರ ಸಮೂಹದ ಪ್ರಮುಖರು, ಹಿಂದೂ ಧರ್ಮವನ್ನು ಉಳಿಸುವ ಬಗ್ಗೆ ಹೇಳುತ್ತಿರುವ ಬಿಜೆಪಿಯವರು ದೇವಸ್ಥಾದ ಅರ್ಚಕರ ಒಳಿತಿಗಾಗಿ ತಂದಿರುವ ಈ ಕಾಯಿದೆಯನ್ನು ಬೆಂಬಲಿಸಬೇಕು. ಧರ್ಮ, ದೇವಸ್ಥಾನ, ಭಕ್ತಾದಿಗಳ ಭಾವನೆಯೊಂದಿಗೆ ರಾಜಕೀಯ ಬೆರಸಬಾರದು ಎಂದು ಸಲಹೆ ನೀಡಿದರು.
ರಾಜ್ಯಪಾಲರು ಸದರಿ‌ ಮಸೂದೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ಅರ್ಚಕರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ‌ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ,‌‌ ದಿನೇಶ್ ಗುಂಡೂರಾವ್‌, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರೊ।। ಶ್ರೀ ಡಾ॥ ರಾಧಾಕೃಷ್ಣ ಕೆ.ಇ., ಡಾ। ಎಸ್.ಆರ್. ಶೇಷಾದ್ರಿ, ಭಟ್ಟರ್, ಡಾ॥ ಕೆ.ಎಸ್.ಎನ್. ದೀಕ್ಷಿತ್, ಟಿ.ಕೆ. ಶಾಮಸುಂದರ್, ಕೆ.ಎಸ್. ಉಮೇಶ್ ಶರ್ಮ, ಹೆಚ್.ಎಸ್. ರಂಗರಾಜನ್ ಸಹಿತ ಅನೇಕ ಗಣ್ಯರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

Related posts