ಬೆಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯಲ್ಲೇ ಭವ್ಯ ರಾಮ ದೇಗುಲ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ಲಾಕ್’ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಶಿಲಾನ್ಯಾಸ ಕಾರ್ಯಕ್ರಮ ಮುಂದಿನ ತಿಂಗಳಲ್ಲಿ ನೆರವೇರಲಿದೆ.
ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿಯಾಗಿದ್ದು ಆಗಸ್ಟ್ ಮೊದಲ ವಾರದ ಮೂರು ಅಥವಾ ಐದನೇ ತಾರೀಖಿನಂದು ನೆರವೇರಿಸಲು ಚಿಂತನೆ ನಡೆದಿದೆ ಎಂದು ಟ್ರ್ರಸ್ಟ್ ಮೂಲಗಳು ತಿಳಿಸಿವೆ.
ಈ ಸಂಬಂಧ ಸಂಬಂಧ ಟ್ರಸ್ಟಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಹಿತ ಪ್ರಮುಖ ಯತಿಗಳೂ ಭಾಗವಹಿಸಿದ್ದರು. ಈ ಸಭೆಯಲ್ಲಿನ ಮಾತುಕತೆ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡ ವಿಶ್ವಪ್ರಸನ್ನ ತೀರ್ಥರು ಆಗಸ್ಟ್ ಮೊದಲ ವಾರದ ಮೂರು ಅಥವಾ ಐದರಂದು ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆಗಳಿವೆ ಎಂದರು. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಜೊತೆಗೆ ಇನ್ನುಳಿದ 70 ಎಕರೆ ಪರಿಸರ ಅಭಿವೃದ್ಧಿಗೆ ಸಾವಿರ ಕೋಟಿ ರೂಪಾಯಿ ವೆಚ್ಚ ತಗಲುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.