ಬೆಂಗಳೂರು: ಆಗಾಗ್ಗೆ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರತ್ತ ಬೆರಳು ತೋರಿಸುವ ಮುನ್ನ ತಮ್ಮನ್ನು ತಾವೇ ನೋಡಿಕೊಳ್ಳಲಿ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯಗಳಿಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಬಾಬು, ಅನಾದಿ ಕಾಲದಿಂದಲೂ ಬಿಜೆಪಿ-ಆರೆಸ್ಸೆಸ್ ನಾಯಕರು ಸಂವಿಧಾನ ಬದಲಾವಣೆ ಬಾಗೆ ಹೇಳಿಕೊಂಡಿರುವ ಸನ್ನಿವೇಶಗಳ ಬಗ್ಗೆ ಗಮನಸೆಳೆದರು. ಸಂಘ ಪರಿವಾರದ ಮೂಲಭೂತ ಸಿದ್ಧಾಂತಗಳಿಗೆ ಅನುಗುಣವಾಗಿ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವ ಹಿಡನ್ ಅಜೆಂಡ ಹೊಂದಿರುವ ಬಿಜೆಪಿ, ಸಮಯಕ್ಕೆ ಅನುಗುಣವಾಗಿ ತನ್ನ ಬಣ್ಣ ಬದಲಾಯಿಸಿಕೊಂಡು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದೆ. ಜನಸಂಘದ ಕಾಲದಿಂದಲೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಬಿಜೆಪಿ ಆಯಾ ಸಂದರ್ಭದಲ್ಲಿ ಸಂಘ ಪರಿವಾರದ ವೇದಿಕೆಗಳಲ್ಲಿ, ನಾಯಕರ ಹೇಳಿಕೆಗಳಲ್ಲಿ ನಿರಂತರವಾಗಿ ನಮ್ಮ ದೇಶದ ಸಂವಿಧಾನವನ್ನು ಮನುಸ್ಮೃತಿಗೆ ಅನುಗುಣವಾಗಿ ಮೂಲಭೂತವಾದಕ್ಕೆ ಪೂರಕವಾಗಿ ಬದಲಾವಣೆ ಮಾಡುವ ಹೇಳಿಕೆಗಳನ್ನು ನೀಡಿಕೊಂಡು ಬಂದಿದೆ ಎಂದು ರಮೇಶ್ ಬಾಬು ದೂರಿದರು.
ದೆಹಲಿಯ ಖಾಸಗಿ ಮಾಧ್ಯಮದಲ್ಲಿ ಸಂದರ್ಶನ ಒಂದರಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸಂದರ್ಶನದ ಆಯ್ದ ಭಾಗವನ್ನು ತಿರುಚಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಪಡಿಸುವ ವ್ಯರ್ಥ ಪ್ರಯತ್ನದ ಮೂಲಕ ಬಿಜೆಪಿ ನಾಯಕರು ತಮ್ಮ ರಾಜಕೀಯ ಹತಾಶ ಭಾವನೆಯನ್ನು ಗೋಸುಂಬೆ ಬಣ್ಣದ ರೀತಿ ಸ್ಪರ್ಧೆಗೆ ಬಿದ್ದು ಹೊರಹಾಕಿದ್ದಾರೆ. ಕರ್ನಾಟಕದ ಸಂಸದರು ನಾಟಕದಲ್ಲಿ ಬಹಳ ನಾಜೂಕಾಗಿ ಗೆಜ್ಜೆಗಳನ್ನು ಕಟ್ಟಿಕೊಂಡು ತಾಳಕ್ಕೆ ಅನುಗುಣವಾಗಿ ನೃತ್ಯ ಮಾಡುವ ನಾಟಕ ಮಾಡಿದ್ದಾರೆ ಎಂದು ರಮೇಶ್ ಬಾಬು ಲೇವಡಿ ಮಾಡಿದರು. ಡಿ.ಕೆ.ಶಿವಕುಮಾರರನ್ನು ಒಳಗೊಂಡಂತೆ ಕಾಂಗ್ರೆಸ್ ಪಕ್ಷದ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಸಂವಿಧಾನದ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯನ್ನು ಸಂಘ ಪರಿವಾರದ ಅಥವಾ ಬಿಜೆಪಿಯ ಯಾವೊಬ್ಬ ನಾಯಕರೂ ಉಳಿಸಿಕೊಂಡಿಲ್ಲ ಎಂದವರು ಎದಿರೇಟು ನೀಡಿದರು.
ಡಾ.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿ ಆತ್ಮಾರ್ಪಣೆ ಮಾಡಿಕೊಂಡ ನಮ್ಮ ದೇಶದ ಸಂವಿಧಾನವನ್ನು ಮತ್ತು ತ್ರಿವರ್ಣ ಧ್ವಜವನ್ನು ಸಾರಾಸಗಟಾಗಿ ವಿರೋಧಿಸಿದ ಸಂಘ ಪರಿವಾರದ ಮತ್ತು ಬಿಜೆಪಿಯ ಮೂಲ ಜನಸಂಘ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಅಂದಿನಿಂದಲೂ ಸಂವಿಧಾನವನ್ನು ವಿರೋಧಿಸಿ ನಮ್ಮ ದೇಶಕ್ಕೆ ಮನಸ್ಮೃತಿಯ ಕಾನೂನನ್ನು ಪ್ರತಿಪಾದಿಸಿಕೊಂಡು ಬಂದಿದ್ದಾರೆ ಎಂದವರು ನೆನಪಿಸಿದರು.
ಡಿ.ಕೆ.ಶಿವಕುಮಾರ್ ರವರ ಸಂಘಟನಾ ಸಾಮರ್ಥ್ಯದಿಂದ ಕಂಗೆಟ್ಟಿರುವ ರಾಜ್ಯದ ಮತ್ತು ರಾಷ್ಟ್ರದ ಬಿಜೆಪಿ ನಾಯಕರು ಅವರನ್ನು ಕಟ್ಟಿ ಹಾಕಲು ಹಲವಾರು ವಾಮ ಮಾರ್ಗಗಳನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿರುತ್ತಾರೆ. ಹಿಂದಿನ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ದಿವಂಗತ ಅಹಮದ್ ಪಟೇಲರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲಲು ಕಾರಣಕರ್ತರಾದ ಡಿಕೆಶಿ ಮೇಲೆ ಕೇಂದ್ರದ ತಖತ್ ಸಂಸ್ಥೆಗಳನ್ನು ಬಳಸಿಕೊಂಡು ತೊಂದರೆ ನೀಡಿ, ತಿಹಾರ್ ಜೈಲಿಗೆ ಕಳುಹಿಸಲಾಯಿತು. ಈಗ ಖಾಸಗಿ ಚಾನೆಲ್ ಕಾರ್ಯಕ್ರಮವನ್ನು ಬಳಸಿಕೊಂಡು ಅವರನ್ನು ಹಣಿಯುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ ಎಂದು ರಮೇಶ್ ಬಾಬು ಆಕ್ರೋಶ ಹೊರಹಾಕಿದರು.
ನಮ್ಮ ಸಂವಿಧಾನದ ಅಡಿಯಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಿರುವವರೆಗೆ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯವಾಗುತ್ತದೆ. ದೆಹಲಿ ಹೈ ಕೋರ್ಟ್ ನ್ಯಾಯಮೂರ್ತಿ ಒಬ್ಬರ ಅಧಿಕೃತ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡುತ್ತಿದೆ ಎಂದು ಗುರುತರ ಆರೋಪಗಳು ಕೇಳಿಬರುತ್ತಿದ್ದು, ದೆಹಲಿ ಪ್ರಕರಣ ಸಾರ್ವಜನಿಕ ಟೀಕೆಗೆ ಗುರಿಯಾಗಿರುತ್ತದೆ. ವಾಸ್ತವಗಳನ್ನು ತಿರುಚುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ, ಡಿಕೆಶಿಯವರ ಟಿವಿ ಸಂದರ್ಶನವನ್ನು ಮುಂದೆ ಮಾಡಿಕೊಂಡು ದೆಹಲಿ ನ್ಯಾಯದೀಷರ ಪ್ರಕರಣವನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಬಿಜೆಪಿಯ ಇಂತಹ ವ್ಯವಸ್ಥಿತ ಪಿತೂರಿಯನ್ನು ಖಂಡಿಸುತ್ತದೆ. ಬಿಜೆಪಿ ಮತ್ತು ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಸಂವಿಧಾನ ಬದಲಾಯಿಸುವುದ್ದಿಲ್ಲ ಎಂಬ ಘೋಷಣೆಯನ್ನು ಅಂಬೇಡ್ಕರ್ ರವರ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳಲು ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಎಂದವರು ಹೇಳಿದರು.