ದೆಹಲಿ: ಮಹತ್ವದ ತೀರ್ಮಾನವೊಂದರಲ್ಲಿ ಕೇಂದ್ರ ಬ್ಯಾಂಕ್ ಸಾಲ ತೀರಿಸಲು ಪರದಾಡುತ್ತಿರುವ ಜನರ ನೆರವಿಗೆ ಧಾವಿಸಿದೆ. ಕೊರೋನಾ ಹಾವಳಿಯಿಂದಾಗಿ ದೇಶ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಈ ಸಂದಿಗ್ಧ ಕಾಲದಲ್ಲಿ 3 ತಿಂಗಳ ಬ್ಯಾಂಕ್ ಸಾಲದ ಕಂತು ಪಾವತಿಯಿಂದ ಜನರಿಗೆ ವಿನಾಯಿತಿ ಘೋಷಿಸಿದೆ.
ಸಂಕಷ್ಟದಲ್ಲಿರುವ ಜನರಿಗಾಗಿ ಕೇಂದ್ರ ಸರ್ಕಾರ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಿದ ಬೆನ್ನಲೇ ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಪರ್ಯಾಯ ಸೂತ್ರ ಪ್ರಕಟಿಸಿದೆ. ಸಾಲ ಮರುಪಾವತಿಗೆ 3 ತಿಂಗಳ ವಿನಾಯಿತಿ ನೀಡಿದೆಯಾದರೂ ಇದು ಸಾಲ ಮನ್ನಾ ಅಲ್ಲ, ಮೂರು ತಿಂಗಳ ನಂತರ ಮರು ಪಾವತಿಸಲೇಬೇಕು.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಕರೆದ ಸುದ್ದಿಗೋಷ್ಠಿ ಇಡೀ ದೇಶದ ಗಮನ ಕೇಂದ್ರೀಕರಿಸಿತ್ತು. ಮಾಧ್ಯಮಗಳೊಂದಿಗೆ ಮಾತನಾಡುತ್ತ ಹಲವು ನಿರ್ಧಾರಗಳನ್ನು ಪ್ರಕಟಿಸಿದ ಆರ್ಬಿಐ ಗವರ್ನರ್, ರಿಪೋ ದರ 75 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನು 90 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೆ. 5.5ರಷ್ಟಿದ್ದ ರಿವರ್ಸ್ ರಿಪೋ ಈಗ ಶೇ. 4.20ಕ್ಕೆ ಇಳಿದಿದೆ ಎಂದರು. ಸಿಆರ್ಆರ್ ದರ ಕೂಡಾ ಶೇ. 3ಕ್ಕೆ ನಿಗದಿಯಾಗಿದ್ದು, ಈ ಮೂಲಕ ದೇಶದ ಆರ್ಥಿಕತೆಗೆ 3.75 ಲಕ್ಷ ಕೋಟಿಯಷ್ಟು ಹಣದ ಹರಿವು ಆಗಲಿದೆ.
ಇದೆ ವೇಳೆ, ಪ್ರಸ್ತುತ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದಾಗಿ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗೆ ಸಾಲಗಳ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ 3 ತಿಂಗಳ ವಿನಾಯಿತಿ ನೀಡುವಂತೆ ಆರ್ಬಿಐ ಸೂಚಿಸಿದೆ ಎಂದರು.