“ರಾಜ್ಯಪಾಲ ಹುದ್ದೆಯ ಗೌರವ ಉಳಿಸಿಕೊಳ್ಳಿ, ಇಲ್ಲವೇ ಬೇರೆ ರಾಜ್ಯಕ್ಕೆ ಹೋಗಿ”; ಗೌರ್ನರ್ ಬಗ್ಗೆ ರಾಮಲಿಂಗಾ ರೆಡ್ಡಿ ಗರಂ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ದ ಆಧಾರರಹಿತ ಆರೋಪಗಳನ್ನು ಮುಂದಿಟ್ಟು ನೀಡಲಾದ ಮನವಿ ಬಗ್ಗೆ ವಿವಾದಾತ್ಮಕ ನಿರ್ಧಾರ ಪ್ರಕಟಿಸಿರುವ ರಾಜ್ಯಪಾಲರು ತಮ್ಮ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. “ರಾಜ್ಯಪಾಲ ಹುದ್ದೆಯ ಗೌರವ ಉಳಿಸಿಕೊಳ್ಳಿ, ಇಲ್ಲವೇ ಬೇರೆ ರಾಜ್ಯಕ್ಕೆ ಹೋಗಿ” ಎಂದು ಅವರು ಗೌರ್ನರ್ ವಿರುದ್ದ ಗುಡುಗಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯಲ್ಲಿ ಭಾಗಿಯಾದ ರಾಮಲಿಂಗಾ ರೆಡ್ಡಿ, ಬಿಜೆಪಿಯ ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ಗುಮಾಸ್ತರ ಕಚೇರಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರಿಗೆ ಕೊಡಬೇಕಾದ ಗೌರವವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ರಾಜ್ಯಪಾಲರನ್ನು ಗುಮಾಸ್ತರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಯಾವುದೇ ಅಪಾದನೆ ಇಲ್ಲದಿದ್ದರೂ ಸುಳ್ಳು ಕಾರಣ ನೀಡಿ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಎಂದರೆ, ಬುರುಡೆ ಜನರ ಪಕ್ಷ. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಜರ್ಮನಿಯ ಹಿಟ್ಲರ್ ಆಡಳಿತದಲ್ಲಿ ಸುಳ್ಳನ್ನೇ ನೂರು ಬಾರಿ ಹೇಳಿ ಅದನ್ನು ಸತ್ಯವನ್ನಾಗಿ ಮಾಡಲು ಒಬ್ಬ ಮಂತ್ರಿಯನ್ನು ನೇಮಿಸಿದ್ದರು. ಅದೇ ರೀತಿ ಬಿಜೆಪಿ ಈಗ ದಿನಬೆಳಗಾದರೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಂದೆ ಸುಳ್ಳು ಹೇಳಿ ನಿಜ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಅಂತ್ಯವಾಡುವ ಕೆಲಸ ಮಾಡಬೇಕಿದೆ. ಮೋದಿ ಅವರಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರವರೆಗೆ ದಿನನಿತ್ಯ ಸುಳ್ಳು ಹೇಳದಿದ್ದರೆ ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ ಎಂದರು.

ಬುರುಡೆ ಜತೆಗೆ ಕಡು ಭ್ರಷ್ಟರು ಎಂದರೆ ಬಿಜೆಪಿಯವರು. 2008-2013 ಹಾಗೂ 2019ರಿಂದ 2023ರವರೆಗೆ ನಾವು ಬಿಜೆಪಿ ಆಡಳಿತ ನೋಡಿದ್ದೇವೆ. ಅವರು 11 ವರ್ಷಗಳಲ್ಲಿ ಮಾಡಿರುವ ಭ್ರಷ್ಟಾಚಾರ ಎಲ್ಲೆ ಮೀರಿದೆ. ಇವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದ ತಕ್ಷಣ ಇವರ ವಿರುದ್ಧ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ಕಳುಹಿಸಿದ್ದರೆ ಇಷ್ಟು ಹೊತ್ತಿಗೆ ಇವರಲ್ಲಿ ಅರ್ಧ ಜನ ಜೈಲಲ್ಲಿ ಇರುತ್ತಿದ್ದರು ಎಂದವರು ಹೇಳಿದರು.

ಬಿಜೆಪಿ ಪಕ್ಷ ಎಂದರೆ ಭ್ರಷ್ಟಾಚಾರದ ಗಂಗೋತ್ರಿ. ರಾಷ್ಟ್ರಮಟ್ಟದಲ್ಲಿ ಚುನಾವಣಾ ಬಾಂಡ್ ಗಳ ಮೂಲಕ 9 ಸಾವಿರ ಕೋಟಿ ದೇಣಿಗೆಯಾಗಿ ಹಣ ಪಡೆದಿದ್ದಾರೆ. ಅದರಲ್ಲಿ ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದವರಿಂದ ಪಡೆದಿರುವ ಮೊತ್ತ. ಬೇರೆ ಪಕ್ಷದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತವರನ್ನು ಬಿಜೆಪಿಗೆ ಎಳಎದುಕೊಂಡಿದ್ದು, ದೇಶದಲ್ಲಿರುವ ಎಲ್ಲಾ ಭ್ರಷ್ಟರೂ ಬಿಜೆಪಿಯಲ್ಲೇ ಇದ್ದಾರೆ. ಬಿಜೆಪಿ ಸೇರಿದ ಕಳಂಕಿತರು ಆ ಪಕ್ಷ ಸೇರುತ್ತಿದ್ದಂತೆ ಅವರು ಸ್ವಚ್ಛವಾಗಿಬಿಡುತ್ತಾರೆ. ಇಂತಹವರ ಮಾತು ಕೇಳಿ ರಾಜ್ಯಪಾಲರು ಅರ್ಥಹೀನ ನಿರಧಾರಕ್ಕೆ ಬಂದಿದ್ದಾರೆ. ಅವರ ಸುತ್ತ ಇರುವ ಸಲಹೆಗಾರರರಿಗೆ ತಲೆ ಇದ್ದಿದ್ದರೆ ನೋಟೀಸ್ ಕೊಡುವ ಪ್ರಮೇಯ ಇರುತ್ತಿರಲಿಲ್ಲ. ಬಿಜೆಪಿ ಕೈಗೊಂಬೆಯಾಗಿರುವ ನೀವು ರಾಜ್ಯಪಾಲ ಹುದ್ದೆಯಲ್ಲಿ ಇರಲು ಲಾಯಕ್ಕಿಲ್ಲ. ನೀವು ಈಗಲಾದರೂ ಸರಿಯಾದ ತೀರ್ಮಾನ ಮಾಡಿ ರಾಜ್ಯಪಾಲ ಹುದ್ದೆಯ ಗೌರವ ಉಳಿಸಬೇಕು. ಇಲ್ಲದಿದ್ದರೆ ಬೇರೆ ರಾಜ್ಯಕ್ಕೆ ರಾಜ್ಯಪಾಲರಾಗಿ ಹೋಗಿ ಎಂದು ರಾಮಲಿಂಗ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Related posts