ಭುವನೇಶ್ವರ: ಬಲಿಷ್ಠ, ಭಾರತವನ್ನು ನಿರ್ಮಿಸಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಫೂರ್ತಿಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋಹನ್ ಭಾಗವತ್ ಶುಕ್ರವಾರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ಸಮರ್ಪಣೆ ಮತ್ತು ತ್ಯಾಗವನ್ನು ದೇಶ ಬಲಪಡಿಸಲು ಸ್ಫೂರ್ತಿಯಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು. ಉತ್ಕಲ್ ಬಿಪನ್ನ ಸಹಾಯತ ಸಮಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “1857ರ ಮೊದಲ ಹೋರಾಟದಿಂದ ಹಿಡಿದು ಮೂರು ತಲೆಮಾರುಗಳ ನಿರಂತರ ಹೋರಾಟದ ಬಳಿಕ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ನಮ್ಮ ಪೂರ್ವಜರು ಊಹಿಸಲಾಗದ ಕಷ್ಟ, ಸೆರೆವಾಸ ಮತ್ತು ತ್ಯಾಗವನ್ನು ಭರಿಸಿದ್ದಾರೆ. ಇಂದಿನ ಭಾರತ ಬಲಿಷ್ಠವಾಗಲು ಆ ತ್ಯಾಗದ ಆತ್ಮಸ್ಫೂರ್ತಿಯನ್ನು ಜೀವಂತವಾಗಿರಿಸುವುದು ನಮ್ಮ ಕರ್ತವ್ಯ” ಎಂದರು.
‘ಸ್ವರಾಜ್’ ಪದದ ಅರ್ಥವನ್ನು ವಿಶ್ಲೇಷಿಸಿದ ಭಾಗವತ್, “ಸ್ವರಾಜ್ ಎಂದರೆ ಕೇವಲ ಆಡಳಿತವಲ್ಲ; ‘ಸ್ವ’ ಅರಿವಿನ ಮೇಲೆ ನಿಂತ ವ್ಯವಸ್ಥೆ. ನಿಜವಾದ ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬ ನಾಗರಿಕನ ಸಂತೋಷ, ಸುರಕ್ಷತೆ, ಘನತೆ ಖಚಿತವಾಗುವುದು” ಎಂದು ತಿಳಿಸಿದರು.
ರಾಷ್ಟ್ರಧ್ವಜದ ಧರ್ಮಚಕ್ರವು ಶಾಂತಿ, ಸಾಮರಸ್ಯ, ಧರ್ಮದ ಸಂಕೇತವಾಗಿದ್ದು, ಭಾರತವು ಜಗತ್ತಿಗೆ ಸಮತೋಲನದ ಮಾರ್ಗ ತೋರಬೇಕೆಂಬ ಉದ್ದೇಶ ಹೊಂದಿದೆ ಎಂದು ಹೇಳಿದರು. “ಭಾರತ ‘ವಿಶ್ವಗುರು’ ಆಗಿ, ಇಂದಿನ ಸವಾಲುಗಳಿಗೆ ಪರಿಹಾರ ನೀಡುವ ಜಾಗತಿಕ ನಾಯಕತ್ವ ಸಾಧಿಸಬೇಕು” ಎಂದು ಭಾಗವತ್ ಹುರಿದುಂಬಿಸಿದರು.