ಕೋಲ್ಕತ್ತಾ: ಕೇವಲ ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS ಸಂಘಟನಾ ಕೆಲಸ ಮಾಡುತ್ತಿದೆ ಎಂದು ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ. ಒಗ್ಗಟ್ಟಿನ ಹಿಂದೂ ಸಮಾಜಕ್ಕಾಗಿ ಸಂಘಟನೆಯನ್ನು ರಚಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ಬುರ್ದ್ವಾನ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಏಕತೆಗೆ ಏಕೆ ಒತ್ತು ನೀಡಲಾಗುತ್ತದೆ ಎಂದರು. ಭಾರತವು ಕೇವಲ ಭೌಗೋಳಿಕವಲ್ಲ, ಅದರ ಗಾತ್ರವು ಕಾಲಾನಂತರದಲ್ಲಿ ಬದಲಾಗುತ್ತದೆ. ಭಾರತವು ತನ್ನದೇ ಆದ ಸ್ವಭಾವವನ್ನು ಹೊಂದಿದೆ. ಆ ಸ್ವಭಾವದೊಂದಿಗೆ ಬದುಕಲು ಸಾಧ್ಯವಿಲ್ಲ ಎಂದು ಭಾವಿಸಿದವರು ತಮ್ಮದೇ ಆದ ದೇಶವನ್ನು ಮಾಡಿಕೊಂಡರು. ದೇಶದಿಂದ ಬೇರ್ಪಡದವರು ಭಾರತದ ಸ್ವಭಾವವನ್ನು ಬಯಸಿದ್ದರು ಎಂದು ಭಾಗವತ್ ಹೇಳಿದರು.
ಹಿಂದೂಗಳು ಪ್ರಪಂಚದ ವೈವಿಧ್ಯತೆಯನ್ನು ಸ್ವೀಕರಿಸುವ ಮೂಲಕ ವರ್ಷಗಳಿಂದ ಮುಂದುವರೆದಿದ್ದಾರೆ ಎಂದ ಅವರು, ಈ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು. “ಒಬ್ಬ ವ್ಯಕ್ತಿಯಾಗಿ ಬದುಕಬೇಕು ಆದರೆ ಕೇವಲ ವ್ಯಕ್ತಿಯಾಗಿ ಅಲ್ಲ. ಒಬ್ಬ ವ್ಯಕ್ತಿ ಕುಟುಂಬಕ್ಕಾಗಿ, ಕುಟುಂಬ ಸಮಾಜಕ್ಕಾಗಿ ಮತ್ತು ಸಮಾಜ ದೇಶಕ್ಕಾಗಿ ಬದುಕಬೇಕಿದೆ ಎಂದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಗುರುತು ಇರುತ್ತದೆ. ಆದರೆ ಆ ವ್ಯಕ್ತಿತ್ವವನ್ನು ಇತರರ ಪ್ರಗತಿಗೂ ಬಳಸಬೇಕು. ಪ್ರಗತಿ ಸಾಧಿಸಿದವನು ಇತರರು ಪ್ರಗತಿ ಸಾಧಿಸಲು ಸಹಾಯ ಮಾಡಬೇಕು. ಚಿಂತನೆಯ ಶ್ರೇಷ್ಠತೆ ಇದುವೇ” ಎಂದು ಭಾಗವತ್ ಹೇಳಿದರು.