ಧಾರವಾಡ: ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ಮತ್ತೆ ಹೋರಾಟದ ಅಖಾಡಕ್ಕೆ ಧುಮುಕಿದೆ. ಕೂಡಲಸಂಗಮ ಧರ್ಮ ಕ್ಷೇತ್ರದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲೇ ಈ ಹೋರಾಟ ಆರಂಭವಾಗಿದೆ.
ಈ ಹಿಂದೆಯೇ ಘೋಷಿಸಿದಂತೆ ಅಕ್ಟೊಬರ್ 8 ರಿಂದ 13 ರ ವರೆಗೆ ಈ ಮೀಸಲಾತಿ ಹೋರಾಟ ಮುಂದುವರಿಯಲಿದ್ದು, ಚಳುವಳಿ ಧಾರವಾಡದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಹಂತಗಳಲ್ಲಿ ಸತ್ಯಾಗ್ರಹ ನಡೆಯಲಿದೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿ – ಗೌಡ – ಮಲೆಗೌಡ – ದೀಕ್ಷೆ ಲಿಂಗಾಯತ ರುಗಳಿಗೆ 2A ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳನ್ನು OBC ಮೀಸಲಾತಿಗೆ ಕೂಡಲೇ ಶಿಫಾರಸ್ಸು ಮಾಡುವಂತೆ , ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಈ ಹೋರಾಟ ನಡೆಯಲಿದೆ. ಅಕ್ಟೋಬರ್ 13 ನೇ ಶುಕ್ರವಾರ 2023 ರಂದು ಬೆಳಿಗ್ಗೆ10 ಕ್ಕೆ ಹುಬ್ಬಳ್ಳಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ, ಬಂಕಾಪುರ ಚೌಕನಿಂದ ಬೃಹತ್ ಮೆರವಣಿಗೆ ಮೂಲಕ ಹುಬ್ಬಳ್ಳಿಯ ಗಬ್ಬುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ ಜಿಲ್ಲಾ ಮಟ್ಟದ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ನಡೆಯಲಿದೆ. ಜೊತೆಗೆ ಧಾರವಾಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬಹಿರಂಗ ಸಭೆ ಹಾಗೂ ಜಾಥಾ ನಡೆಯಲಿದೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಯಾವಾಗ ಎಲ್ಲೆಲ್ಲಿ ಹೋರಾಟ?
ಅಕ್ಟೊಬರ್ 8 ಭಾನುವಾರ ಬೆಳಿಗ್ಗೆ 10ಕ್ಕೆ ಕುಂದಗೋಳ, ಸಂಜೆ 5 ಕ್ಕೆ ಕಲಘಟಗಿ ಡುಮ್ಮವಾಡ
ಅಕ್ಟೊಬರ್ 9 ಸೋಮವಾರ ಬೆಳಿಗ್ಗೆ 10 ಕ್ಕೆ ಅಳ್ನವರ, ಸಂಜೆ 5 ಕ್ಕೆ ಧಾರವಾಡ ತಾಲ್ಲೂಕಿನ ಗರಗ
ಅಕ್ಟೊಬರ್ 10 ಮಂಗಳವಾರ ಬೆಳಿಗ್ಗೆ 10ಕ್ಕೆ ಧಾರವಾಡ ನಗರ, ಸಂಜೆ 5 ಕ್ಕೆ ಹುಬ್ಬಳ್ಳಿ ನಗರ
ಅಕ್ಟೊಬರ್ 11 ಬುಧವಾರ ಬೆಳಿಗ್ಗೆ 10ಕ್ಕೆ ನವಲಗುಂದ, ಸಂಜೆ 5 ಕ್ಕೆ ಅಣ್ಣಿಗೇರಿ
ಅಕ್ಟೊಬರ್ 12 ಗುರುವಾರ ಬೆಳಿಗ್ಗೆ 10ಕ್ಕೆ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ
ಅಕ್ಟೊಬರ್ 13 ಶುಕ್ರವಾರ ಬೆಳಿಗ್ಗೆ 10ಕ್ಕೆ ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ನಂತರ ಯಲ್ಲಾಪುರ ಓಣಿ ಬಂಕಾಪುರ ಚೌಕನಿಂದ ಪಾದಯಾತ್ರೆ ಮೂಲಕ ಗಬ್ಬುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟ ಲಿಂಗ ಪೂಜೆ ಯೊಂದಿಗೆ ಹೋರಾಟ.