ಬೆಂಗಳೂರು: ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿರುವಾಗ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವವರು ಅನೇಕರಿದ್ದಾರೆ. ಅಂತಹ ಸಮಯಸಾಧಕರಿಗೆ ಸರ್ಕಾರ ತಕ್ಕ ಶಿಕ್ಷೆಯನ್ನೇ ನೀಡಿದೆ. ಬೀಜ ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ ಪರವಾನಿಗೆಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ರಾಣೆಬೆನ್ನೂರಿನ ಖಾಸಗಿ ಆಗ್ರೋ ಟ್ರೇಡರ್ಸ್ ಕಂಪೆನಿಯು ಸುಮಾರು 12 ವರ್ಷಗಳಿಂದ ರೈತರ ಬೀಜ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಕಳಪೆ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಏಪ್ರಿಲ್ 20 ರಂದು ಈ ಟ್ರೆಡರ್ಸ್ ಮಳಿಗೆಗೆ ವಿಚಕ್ಷಣಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಹಾವೇರಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಇವರ ನೇತೃತ್ವದ ವಿಚಕ್ಷಣಾ ತಂಡ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿದಾಗ ಸಂಶಯಾಸ್ಪದ ಬಿತ್ತನೆಬೀಜ ಪ್ಯಾಕಿಂಗ್ ಮಾಡುವ ಉಪಕರಣಗಳು ಲಭ್ಯವಾಗಿದ್ದವು. ಬಿಡಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ದುರುದ್ದೇಶದ ಅನುಮಾನ ವ್ಯಕ್ತವಾಗಿತ್ತು.
ಈ ರೀತಿಯ ವ್ಯವಹಾರ ಬೀಜ ಅಧಿನಿಯಮಗಳ ಉಲ್ಲಂಘನೆಯಾಗಿದೆ ಎಂದು ಮನಗಂಡ ಸರ್ಕಾರ ಈ ಕಂಪೆನಿಯ ಪರವಾನಿಗೆಯನ್ನು ಅಮಾನತುಮಾಡಿ ಸಮರ್ಪಕ ಉತ್ತರ ಸ್ಪಷ್ಟ ಕಾರಣ ನೀಡುವಂತೆ ಷೋಕಾಸ್ ನೀಡಿದೆ.