ಚೆನ್ನೈ: ತಮಿಳುನಾಡು ರಾಜ್ಯ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆ (₹) ಅನ್ನು ತಮಿಳು ಅಕ್ಷರ ‘ರು’ (‘ರುಬಾಯಿ’ ನಿಂದ, ಅಂದರೆ ರೂಪಾಯಿ) ನೊಂದಿಗೆ ಬದಲಾಯಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಮರ್ಥಿಸಿಕೊಂಡಿದ್ದಾರೆ. ತಮಿಳು ಭಾಷೆಯನ್ನು ವಿರೋಧಿಸುವವರು ಈ ವಿಷಯವನ್ನು ಅತಿರೇಕಕ್ಕೆ ತಳ್ಳಿದ್ದಾರೆ ಎಂದು ಅವರು ವಾದಿಸಿದ್ದಾರೆ.
ಮಾರ್ಚ್ 14 ರಂದು ಮಂಡಿಸಲಾದ ತಮಿಳುನಾಡು ಬಜೆಟ್ 2025-26 ಲೋಗೋದಿಂದ ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವ ನಿರ್ಧಾರವು ಬಿಜೆಪಿ ಮತ್ತು ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ರೂಪಾಯಿ ಲೋಗೋ ವಿಚಾರದ್ಲಲಿನ ಚರ್ಚೆಗಳ ಕುರಿತಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ಕ್ರಮವು ತಮಿಳುನಾಡಿನ ಭಾಷಾ ನೀತಿಗೆ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಹಿಂದೆ ಇಂಗ್ಲಿಷ್‌ನಲ್ಲಿ ‘ರೆ’ ಬದಲಿಗೆ ತಮಿಳು ಅಕ್ಷರ ‘ರು’ ಅನ್ನು ಬಳಸಿದ್ದಾರೆ ಎಂದು ಅವರು ಗಮನಸೆಳೆದರು.
ಈ ನಡುವೆ, ಆಡಳಿತಾರೂಢ ಡಿಎಂಕೆ ರಾಷ್ಟ್ರೀಯ ಏಕತೆಯನ್ನು ಪಣಕ್ಕಿಟ್ಟು ಪ್ರಾದೇಶಿಕ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು, ಇದನ್ನು “ಭಾಷೆ ಮತ್ತು ಪ್ರಾದೇಶಿಕ ದುರಭಿಮಾನದ ಸಂಪೂರ್ಣ ತಪ್ಪಿಸಬಹುದಾದ ಉದಾಹರಣೆ” ಎಂದು ಕರೆದರು. ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವುದು “ಭಾರತೀಯ ಏಕತೆಯನ್ನು ದುರ್ಬಲಗೊಳಿಸುವ ಮತ್ತು ಪ್ರಾದೇಶಿಕ ಹೆಮ್ಮೆಯ ನೆಪದಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುವ ಅಪಾಯಕಾರಿ ಮನಸ್ಥಿತಿಯನ್ನು” ಸೂಚಿಸುತ್ತದೆ ಎಂದು ಅವರು ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಟಾಲಿನ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೇ ಇಂಗ್ಲಿಷ್‌ನಲ್ಲಿ ‘ರೆ’ ಬದಲಿಗೆ ತಮಿಳು ಅಕ್ಷರವನ್ನು ಬಳಸಿದ್ದಾರೆ” ಎಂದು ತಮ್ಮದೇ ದಾಟಿಯಲ್ಲಿ ಬೊಟ್ಟುಮಾಡಿದರು.