ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟಕ್ಕೆ ಜಯ: ಬೇಡಿಕೆ ಈಡೇರಿಸಲು ಸರ್ಕಾರ ಸಮ್ಮತಿ

ಬೆಂಗಳೂರು: ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ. ರೈತರ ಬೇಡಿಕೆ ಈಡೇರಿಸಲು ಸರ್ಕಾರವು ಸಮ್ಮತಿ ಎಂದಿದೆ. ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ‌ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹ 23ನೇ ದಿನವಾದ ಇಂದೂ ಮುಂದುವರಿಯಿತು. ಅಷ್ಟರಲ್ಲೇ ಅಚ್ಚರಿಯ ತೀರ್ಮಾನ ಪ್ರಕಟವಾಗಿದೆ.

ಆಹೋ ರಾತ್ರಿ ಧರಣಿ ನಿರತ ಕಬ್ಬು ಬೆಳೆಗಾರ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಚರ್ಚೆ ನಡೆಸಿದರು. ಹೋರಾಟ ನಿರತ ರೈತರಿಗೆ ಬುಲಾವ್ ನೀಡಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಹಿತ ಪ್ರಮುಖರೊಂದಿಗೆ ಚರ್ಚೆ ನಡೆಸಿದ ಸಿಎಂ, ಅನ್ನದಾತರ ಬೇಡಿಕೆ ಈಡೇರಿಸಲು ಸಿದ್ದ ಎಂದು ಭರವಸೆ ನೀಡಿದರು. ಆರೋಗ್ಯ ಸಚಿವ ಸುಧಾಕರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಡಿಸಿಪಿ ಲಕ್ಷ್ಮಣ್ ನಿಂಬರಗಿ, ರೈತ ಮುಖಂಡರುಗಳಾದ
ವೀರನಗೌಡ ಪಾಟೀಲ್, ಕುಮಾರ್ ಬುಬಾಟಿ, ಅಂಜನಪ್ಪ ಪೂಜಾರ, ಗುರುಸಿದ್ದಪ್ಪ ಕೋಟಗಿ ಹತ್ತಳ್ಳಿ ದೇವರಾಜ್ ಉಪಸ್ಥಿತರಿದ್ದರು.

ರೈತರ ಬೇಡಿಕೆ ಕುರಿತಂತೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಬ್ಬಿನ ಉತ್ಪನ್ನಗಳ ಲಾಭ ಹೆಚ್ಚುವರಿ 50 ರೂ ಮಾಡಿರುವುದನ್ನು ಸರ್ಕಾರ ಸದ್ಯದಲ್ಲೇ ಪುನರ್ ಪರಿಶೀಲನೆ ನಡೆಸಿ ಹೆಚ್ಚಳ ಮಾಡಲಾಗುವುದು. ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಏರಿಕೆಯಾಗಿರುವ ಬಗ್ಗೆ ವರದಿ ಪಡೆದು ಅದನ್ನು ಕಡಿಮೆ ಮಾಡಿ ರೈತರಿಗೆ ಹೆಚ್ಚು ಬೆಲೆ ಸಿಗುವಂತಾಗುವ ತೀರ್ಮಾನವನ್ನು ಕೈಗೊಳ್ಳಲಾಗುವುದು, ತೂಕದಲ್ಲಿ ಮೋಸ ತಡೆಗಟ್ಟಲು ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದ ವತಿಯಿಂದ ಎಪಿಎಂಸಿಗಳ ಮೂಲಕ ತೂಕದ ಯಂತ್ರ ಸರ್ಕಾರ ಸ್ಥಾಪಿಸಲಾಗುವುದು. ಹಾಗಾಗಿ ತಾವು ಚಳುವಳಿಯನ್ನು ಕೈ ಬಿಡಬೇಕು ಎಂದು ರೈತ ಮುಖಂಡರಿಗೆ ಸಿಎಂ ಮನವಿ ಮಾಡಿದರು

ಚರ್ಚೆ ಆರಂಭದಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರು ನಿರಂತರ 23 ದಿನದಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಗಂಭೀರ ಚಿಂತನೆ ನಡೆಯುತ್ತಿಲ್ಲ, ಈಗಿನ ಕಬ್ಬಿನ ಎಫ್‌ಆರ್‌ಪಿ ದರ ಪ್ರಕಾರ ರೈತರಿಗೆ ಉತ್ಪಾದನ ವೆಚ್ಚವು ಬರುತ್ತಿಲ್ಲ, ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳು ಮನಬಂದಂತೆ ಏರಿಕೆ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಿದರೆ ರೈತರ ಪಾಲಿಗೆ ಟನ್‌ಗೆ 150 ಹೆಚ್ಚುವರಿ ಉಳಿಯುತ್ತದೆ, ಕಾರ್ಖಾನೆಗಳಿಂದ ಕೊಡಿಸಲು ಸಾಧ್ಯವಾಗದಿದ್ದರೆ ಸರ್ಕಾರವೇ ಹೆಚ್ಚುವರಿ ದರ ನೀಡಿ ರೈತರ ರಕ್ಷಣೆ ಮಾಡಿ. ನಾವು ರಾಜಕಾರಣ ಮಾಡಲು ಹೋರಾಟ ಮಾಡುತ್ತಿಲ್ಲ, ರೈತರ ಬದುಕಿನ ಬಗ್ಗೆ ಸರ್ಕಾರದ ಗಮನ ಸೆಳೆಯಲು ಚಳುವಳಿ ಮಾಡಲಾಗುತಿದೆ ಎಂದು ಮನವರಿಕೆ ಮಾಡಿದರು. ರಾಜ್ಯದ 50ರಷ್ಟು ಕಬ್ಬು ಬೆಳೆಯುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಗಂಭೀರ ಚಿಂತನೆ ನಡೆಸಿ ಎಂದರು

ಮನವಿ ಆಲಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಕ್ಕರೆ ಕಾರ್ಖಾನೆಗಳು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ, ಅದಕ್ಕಾಗಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ, ಪಾಲಿಸಬೇಕು ನಿಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂದರು

Related posts