ಸುಸಂಸ್ಕೃತರ ನಾಡಲ್ಲಿ ವಿಕೃತಿ; ಪತ್ನಿ ಮೇಲೆಯೇ ಕ್ರೌರ್ಯ

ಕರುನಾಡನ್ನು ಸುಸಂಸ್ಕೃತರ ನಾಡು ಎಂದೇ ಬಣ್ಣಿಸಲಾಗುತ್ತಿದೆ. ಅದರಲ್ಲೂ ಕನ್ನಡಿಗರ ಸಹನೆಶೀಲ ವ್ಯಕ್ತಿತ್ವ ಇತರರಿಗೆ ಮಾದರಿ ಎನ್ನುವವರು ಅನೇಕರು. ಆದರೆ ಈ ಸುಸಂಸ್ಕೃತರ ನಾಡಲ್ಲೇ ವಿಕೃತಿ ನಡೆದಿರುವುದು ದುರಾದೃಷ್ಟಕರ.

ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆಗೈದ ದಾರುಣ ಘಟನೆ ನಡೆದಿದೆ. ಇದು ನಡೆದಿರುವುದು ಬಳ್ಳಾರಿ ಜಿಲ್ಲೆ ಹೊಸಪೇಟೆ ಸಮೀಪದ ಟಿ.ಬಿ.ಡ್ಯಾಂ 13ನೇ ವಾರ್ಡ್ ಬಳಿ.

ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಆತನ ಕ್ರೌರ್ಯ ಹೇಗಿತ್ತೆಂದರೆ, ಕೊಡಲಿಯಿಂದ ಹೊಡೆದ ರಭಸಕ್ಕೆ ದುರ್ದೈವಿ ಪತ್ನಿಯ ರುಂಡ-ಮುಂಡ ಬೇರ್ಪಟ್ಟಿದೆ. 30ರ ಹರೆಯದ ಲಲಿತಾ ಕೊಲೆಯಾಗಿದ್ದು, ಪತಿ 29 ವರ್ಷದ ಅಣ್ಣೆಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

13 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಈ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತೆನ್ನಲಾಗಿದ್ದು, ಕೆಲ ತಿಂಗಳ ಹಿಂದೆ ಪತ್ನಿಯನ್ನು ತವರುಮನೆಗೆ ಕಳುಹಿಸಿಕೊಟ್ಟಿದ್ದ. ಹಿರಿಯರು ಬುದ್ದಿ ಹೇಳಿದ ನಂತರ ಪತ್ನಿಯನ್ನು ಕೆಲ ದಿನಗಳ ಹಿಂದೆ ಪುನಃ ಮನೆಗೆ ಕರೆಸಿಕೊಂಡಿದ್ದ ಈತ ಗುರುವಾರ ರಾತ್ರಿ ಮತ್ತೆ ಜಗಳವಾಡಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ.. ಭಾರತದಲ್ಲೂ ಅಮಾನವೀಯತೆ; ದೇಶವನ್ನೇ ಬೆಚ್ಚಿ ಬೀಳಿಸಿದ ವೀಡಿಯೋ 

 

Related posts